ಕೋಲ್ಕತಾ: ಬುಡಕಟ್ಟು ಸಮುದಾಯದ ಮನೆಗೆ ತೆರಳಿದ್ದ ವೇಳೆ ಅಮಿತ್ ಶಾ ಸಮ್ಮುಖದಲ್ಲೇ ಬಿಜೆಪಿ ಮುಖಂಡರು ಪಕ್ಷ ಸೇರುವಂತೆ ಬೆದರಿಕೆ ಹಾಕಿದ್ದರು ಎಂಬ ಟಿಎಂಸಿ ಮುಖಂಡ ಮದನ್ ಮಿತ್ರಾ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.
ಅತ್ತ ಮದನ್ ಮಿತ್ರಾ ಅವರು ಸುದ್ದಿಗೋಷ್ಠಿ ವಿಚಾರ ಪಶ್ಟಿಮ ಬಂಗಾಳದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದಂತೆ ಇತ್ತ ಮದನ್ ಮಿತ್ರಾ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿ ಹಾಕಿದೆ. ಅಲ್ಲದೆ ಬುಡಕಟ್ಟು ಕುಟುಂಬದ ಆರೋಪಗಳ ಹಿಂದೆ ಟಿಎಂಸಿ ಷಡ್ಯಂತ್ರವಿದ್ದು, ಬುಡಕಟ್ಟು ಕುಟುಂಬವನ್ನು ತನ್ನ ರಾಜಕೀಯ ಏಳಿಗೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತಾನು ಮಾಡುತ್ತಿರುವ ಕೆಲಸವನ್ನು ಬಿಜೆಪಿ ಮೇಲೆ ಹಾಕುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನೀಚ ರಾಜಕೀಯಕ್ಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಹೇಳಿದ್ದಾರೆ.
ಇತ್ತೀಚೆಗೆಷ್ಟೇ ಪಶ್ಚಿಮ ಬಂಗಾಳಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದರು. ಈ ವೇಳೆ ಪುರುಲಿಯಾ ಜಿಲ್ಲೆಯ ಲಗ್ಡಾ ಗ್ರಾಮದ ಬುಡಕಟ್ಟು ಸಮುದಾಯದ ಕುಟುಂಬದ ಮನೆಗೆ ತೆರಳಿದ್ದ ಶಾ ಉಪಾಹಾರ ಸೇವಿಸಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ನಿನ್ನೆ ಇದೇ ಕುಟುಂಬ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿತ್ತು. ಅಲ್ಲದೆ ಬಿಜೆಪಿ ಮುಖಂಡರು ಪಕ್ಷ ಸೇರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿತ್ತು.