ದೇಶ

ಸ್ವಿಸ್ ಬ್ಯಾಂಕ್ ನಲ್ಲಿರುವ ಎಲ್ಲಾ ಹಣವೂ ಕಪ್ಪು ಹಣ ಅಲ್ಲ: ಕೇಂದ್ರ ಸರ್ಕಾರ

Srinivas Rao BV
ನವದೆಹಲಿ: ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣ 2017 ರಲ್ಲಿ ಶೇ.50 ರಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ತನ್ನ ಕ್ರಮಗಳ ಸಮರ್ಥನೆಗೆ ನಿಂತಿದ್ದು ಸ್ವಿಸ್ ನಲ್ಲಿರುವ ಎಲ್ಲ ಹಣವೂ ಕಪ್ಪು ಹಣವಲ್ಲ ಎಂದು ಹೇಳಿದೆ. 
ಹಣಕಾಸು ಸಚಿವ ಪಿಯೂಷ್ ಗೊಯಲ್ ಈ ಬಗ್ಗೆ ಹೇಳಿಕೆ ನೀಡಿದ್ದು, ಸ್ವಿಸ್ ಬ್ಯಾಂಕ್ ಗಳಲ್ಲಿರುವ ಎಲ್ಲಾ ಹಣವೂ ಕಪ್ಪು ಹಣವಲ್ಲ, ಒಂದು ವೇಳೆ ಎಲ್ಲಾದರೂ ತಪ್ಪು ನಡೆದಿರುವುದು ಗಮನಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 
ಕಳೆದ ನವೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಿಟ್ಜರ್ಲ್ಯಾಂಡ್ ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 2018 ರ ಜ.1 ರಿಂದ ಎಲ್ಲಾ ಡಾಟಾಗಳನ್ನು ಸ್ವಿಟ್ಜರ್ಲ್ಯಾಂಡ್ ನಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ. 2019 ರಲ್ಲಿ ಈ ಮಾಹಿತಿಗಳನ್ನು ಬಹಿರಂಗಪಡಿಸಲಾಗುತ್ತದೆ. ಲೋಪದೋಷವಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಖಂಡಿತ ಕ್ರಮ ಜರುಗಿಸಲಾಗುತ್ತದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. 
ಕೇಂದ್ರ ಸರ್ಕಾರ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿ ಸ್ವಿಸ್ ಬ್ಯಾಂಕ್ ನಲ್ಲಿನ ಠೇವಣಿ ಕಡಿಮೆಯಾಗಿದೆ. ಈ ಹಿಂದಿನ ವರದಿಗಳ ಪ್ರಕಾರ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹಣ 2016 ರಲ್ಲಿ ಶೇ.45 ರಷ್ಟು ಇಳಿದಿದೆ ಎಂದು ಹೇಳಲಾಗಿತ್ತು. ಇದನ್ನೇ ಕೇಂದ್ರ ಸರ್ಕಾರ ತನ್ನ ಕ್ರಮಗಳ ಸಾಧನೆಗಳ ಪಟ್ಟಿಯಲ್ಲೂ ಸೇರಿಸಿತ್ತು. ಆದರೆ ಈಗ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಒಂದು ವರ್ಷವಿರುವಾಗಲೇ  ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣ 2017 ರಲ್ಲಿ ಶೇ.50 ರಷ್ಟು  ಏರಿಕೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. 
ಇನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಸಹ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ವಿಪಕ್ಷಗಳಿಗೆ ಬ್ಲಾಗ್ ಮೂಲಕ ತಿರುಗೇಟು ನೀಡಿದ್ದು, ಸಾರ್ವಜನಿಕ ಸಂವಾದದಲ್ಲಿ ತೊಡಗಿರುವವರು ತಮ್ಮ ಅಭಿಪ್ರಾಯ ತಿಳಿಸುವುದಕ್ಕೂ ಮುನ್ನ ಮೂಲಭೂತ ಅಂಶಗಳನ್ನು ತಿಳಿದುಕೊಂಡಿರಬೇಕು ಎಂದು ಹೇಳಿದ್ದಾರೆ. 
SCROLL FOR NEXT