ಟಿಎಂಸಿ ಪಕ್ಷದ ಸುದ್ದಿಗೋಷ್ಠಿ
ಕೋಲ್ಕತಾ: ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲೇ ಬಿಜೆಪಿ ಮುಖಂಡರು ಬುಡಕಟ್ಟು ಕುಟುಂಬವೊಂದಕ್ಕೆ ಪಕ್ಷ ಸೇರುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ತೃಣಮೂಲ ಕಾಂಗ್ರೆಸ್ ಮುಖಂಡ ಮದನ್ ಮಿತ್ರಾ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿಯಾದ ಲಗ್ಡಾ ಗ್ರಾಮದಲ್ಲಿರುವ ಬುಡಕಟ್ಟು ಕುಟುಂಬಸ್ಥರ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮದನ್ ಮಿತ್ರಾ ಆರೋಪಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಸುದ್ದಿಗೋಷ್ಛಿ ನಡೆಸಿ ಮಾಹಿತಿ ನೀಡಿದ ಮದನ್ ಮಿತ್ರಾ ಅವರು ಬಿಜೆಪಿ ಮುಖಂಡರಿಂದ ತಮಗೆ ರಕ್ಷಣೆ ನೀಡುವಂತೆ ಬುಡಕಟ್ಟು ಕುಟುಂಬ ಕಾಲಿಘಾಟ್ ನಲ್ಲಿರುವ ತೃಣಮೂಲಕ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿತ್ತು. ಈ ವೇಳೆ ವಿಚಾರ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಾಧ್ಯಮಗಳ ಮುಂದೆ ಸಂತ್ರಸ್ಥ ಕುಟುಂಬಸ್ಥರ ಪರೇಡ್ ಕೂಡ ಮಾಡಿಸಿದರು.
'ಬಿಜೆಪಿ ರಾಷ್ಟ್ರಾಧ್ಯ ಅಮಿತ್ ಶಾ ಅವರ ಸಮ್ಮುಖದಲ್ಲೇ ಆ ಪಕ್ಷದ ಮುಖಂಡರು ಈ ಕುಟುಂಬಸ್ಥರಿಗೆ ಪಕ್ಷಕ್ಕೆ ಸೇರುವಂತೆ ಬೆದರಿಕೆ ಹಾಕಿದ್ದಾರೆ ಎಂದರೆ ಅವರು ಎಂತಹ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ. ಈ ಹಿಂದಿನ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಕನಿಷ್ಠ ಪಕ್ಷ ಒಂದು ಟಿಕೆಟ್ ಕೂಡ ನೀಡದ ಪಕ್ಷ ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಆ ಸಮುದಾಯದ ಒಲೈಕೆಗೆ ಮುಂದಾಗಿದೆ. ಅದೂ ಸಾಧ್ಯವಾಗದಿದ್ದಾಗೆ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಅಮಿತ್ ಶಾ ಅವರೆ ಮುಂದೆ ನೀವೇನಾದರೂ ಪುರುಲಿಯೂ ಗ್ರಾಮಕ್ಕೆ ಹೋದರೆ ಆ ಗ್ರಾಮಸ್ಥರೇ ನಿಮಗೆ ಬಹಿಷ್ಕಾರ ಹಾಕುತ್ತಾರೆ ಎಂದು ಮದನ್ ಮಿತ್ರಾ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಆ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದರಿಂದ ಭಯಗೊಂಡ ಬಿಜೆಪಿ ಇಂತಹ ನೀಚ ರಾಜಕೀಯ ಮಾಡುತ್ತಿದೆ. ಪಶ್ಚಿಮ ಬಂಗಾಳ ಉತ್ತರ ಪ್ರದೇಶವಲ್ಲ. ಬಂಗಾಳದಲ್ಲಿ ನಿರಂತರ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದೀರಿ. ಆದರೆ ಅದು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ತಮ್ಮದ ಜನಪರ ಸರ್ಕಾರ ಮತ್ತು ಜನರಿಗಾಗಿಯೇ ಕೆಲಸ ಮಾಡುವ ಸರ್ಕಾರ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಮದನ್ ಮಿತ್ರಾ ಹೇಳಿದ್ದಾರೆ.
ದೀದಿ ನಮ್ಮ ರಕ್ಷಣೆಗೆ ನಿಲ್ಲುತ್ತಾರೆ ಎಂದು ತಿಳಿದಿತ್ತು. ಹೀಗಾಗಿ ನಗರಕ್ಕೆ ಆಗಮಿಸಿದೆವು: ಸಂತ್ರಸ್ಥ
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ಥ ಕುಟುಂಬದ ಸದಸ್ಯ ಪುಚು ರಾಜ್ಬರ್, ನಮ್ಮ ಮನೆಗೇ ಆಗಮಿಸಿ ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಬೆದರಿಕೆ ಹಾಕಿದ್ದರು. ಆದರೆ ನಾವು ಬಿಜೆಪಿ ಸೇರುವುದರಿಂದ ಅವರಿಗಾಗುವ ಲಾಭ ನಷ್ಟಗಳ ಬಗ್ಗೆ ತಿಳಿದಿಲ್ಲ. ಆದರೆ ಅವರು ಹೇಳಿದ ರೀತಿ ನಮಗೆ ಭಯ ಹುಟ್ಟಿಸಿತು. ಹೀಗಾಗಿ ನಾವು ರಕ್ಷಣೆ ಕೋರಿ ಮಮತಾ ಬ್ಯಾನರ್ಜಿ ಅವರ ಬಳಿ ಬಂದೆವು ಎಂದು ಹೇಳಿದರು. ಇದೇ ವೇಳೆ ಅದೇ ಕುಟುಂಬದ ಸದಸ್ಯರಾದ ತಾಯಿ ಅಸ್ತಾಮಿ ರಾಜ್ಭರ್, ಸಿಸುಬಾಲಾ ರಾಜ್ಹರ್ ಪುತ್ರ ಸಂಜಯ್ ರಾಜ್ಭರ್ ತೃಣಮೂಲ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಪಕ್ಷದ ಘೋಷಣೆ ಕೂಗಿ ಅಧಿಕೃತವಾಗಿ ಟಿಎಂಸಿ ಪಕ್ಷ ಸೇರಿದರು.