ಮುಂಬೈ: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧನಕ್ಕೊಳಗಾಗಿರುವ ಬ್ಯಾಂಕ್ ನ ಇಂಟರ್ನಲ್ ಚೀಫ್ ಆಡಿಟರ್ ಬಿಶ್ನುಬ್ರತ ಮಿಶ್ರಾ ಅವರನ್ನು ಮುಂಬೈ ಕೋರ್ಟ್ ಶುಕ್ರವಾರ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.
2011ರಿಂದ 2015ರ ವರೆಗೆ ಬ್ರಾಡಿ ಹೌಸ್ ಶಾಖೆಯಲ್ಲಿ ಆಡಿಟಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದ ಮಿಶ್ರಾನನ್ನು ಹೆಚ್ಚಿನ ವಿಚಾರಣೆಗಾಗಿ ಮುಂಬೈ ಕೋರ್ಟ್ ಮಾರ್ಚ್ 14ರ ವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 12, 600 ಕೋಟಿಗೂ ಅಧಿಕ ಹಣವನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಭರಣ ಉಧ್ಯಮಿಗಳಾದ ನೀರವ್ ಮೋದಿ, ಆತನ ಸೋದರ ಮಾವ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಉದ್ಯಮಿ ನೀರವ್ ಮೋದಿ ದೇಶದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿದ್ದಾನೆ.