ಶಿಲ್ಲಾಂಗ್: ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶ ನಿರ್ಣಾಯಕ ಹಂತ ತಲುಪಿದ್ದು, ಮೇಘಾಲಯದಲ್ಲಿ ಯಾವೊಂದೂ ಪಕ್ಷ ಪೂರ್ಣ ಬಹುಮತೆ ಪಡೆಯುವಲ್ಲಿ ವಿಫಲವಾಗಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಮೇಘಾಲಯದ ಒಟ್ಟು 59 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಪಿಪಿ ಪಕ್ಷ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಂತೆಯೇ ಬಿಜೆಪಿ ಪಕ್ಷ ಕೇವಲ 6 ಸ್ಥಾನಗಳಿಗೆ ಸಮಾಧಾನ ಪಟ್ಟುಕೊಂಡಿದ್ದು, ಇತರರು 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅವಶ್ಯಕತೆ ಇದ್ದು, ಇದೇ ಕಾರಣಕ್ಕೆ ಮೇಘಾಲಯದಲ್ಲಿ ಇದೀಗ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಗೋವಾ ಪರಿಸ್ಥಿತಿ ಮರುಕಳಿಸದಿರಲು ದೌಡಾಯಿಸಿದ ಕೈ ನಾಯಕರು
ಮತ್ತೊಂದೆಡೆ ಈ ಹಿಂದೆ ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನಹೊಂದಿದ್ದರೂ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು. ಗೋವಾದಲ್ಲಿ ಬಿಜೆಪಿ ಹೆಣೆಗ ರಣತಂತ್ರಕ್ಕೆ ಬಲಿಯಾದ ಕಾಂಗ್ರೆಸ್ ಸರ್ಕಾರದಿಂದ ದೂರವುಳಿಯುವಂತಾಗಿತ್ತು. ಇದು ಕಾಂಗ್ರೆಸ್ ಹೈ ಕಮಾಂಡ್ ಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಇಂತಹುದೇ ಪರಿಸ್ಥಿತಿ ಇದೀಗ ಮೇಘಾಲಯದಲ್ಲೂ ನಿರ್ಮಾಣವಾಗಿದ್ದು, ಗೋವಾ ಪರಿಸ್ಥಿತಿ ಮರುಕಳಿಸಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕರು ಮೇಘಾಲಯಕ್ಕೆ ದೌಡಾಯಿಸಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮೇಘಾಲಯ ತಲುಪಿದ್ದು, ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.