ಮುಂಬೈ: ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು ಸಿಬಿಐ ಪೊಲೀಸರು ಹೆಚ್ಚಿನ ತನಿಖೆಗಾಗಿ ಮುಂಬೈಗೆ ಕರೆದೊಯ್ದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮುಂಬೈನ ಜೈಲಿನಲ್ಲಿರುವ ಆರೋಪಿ ಮುಖರ್ಜಿಯನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕಳೆದ ವರ್ಷ ಮೇ 15ರಂದು ಪ್ರಕರಣ ಬಯಲಿಗೆ ಬಂದಿದ್ದು ಸಿಬಿಐ ಎಫ್ಐಆರ್ ದಾಖಲಿಸಿತ್ತು. ಕಾರ್ತಿ ಪರೋಕ್ಷವಾಗಿ ಮಾಲೀಕರಾಗಿರುವ ಅಡ್ವಾಂಟೇಜ್ ಕನ್ಸಲ್ಟಿಂಗ್ ಪ್ರೈ.ಲಿಗೆ ಎಫ್ಐಪಿಬಿ ಅನುಮೋದನೆಗೆ ಸಂಬಂಧಿಸಿ ಐಎನ್ಎಕ್ಸ್ ಮೀಡಿಯಾವು 10 ಲಕ್ಷ ರುಪಾಯಿ ನೀಡಿದ್ದಾಗಿ ದಾಖಲೆಗಳು ಸ್ಪಷ್ಟವಾಗಿ ಹೇಳಿದೆ. ಮೀಡಿಯಾ ಸಂಸ್ಧೆಯ 300 ಕೋಟಿ ರುಪಾಯಿ ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಕಾರ್ತಿ ಅವರು ಹಣ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಕಾರ್ತಿ ಚಿದಂಬರಂ ಅವರನ್ನು ದೆಹಲಿ ಪಟಿಯಾಲ ಕೋರ್ಟ್ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಕಾರ್ತಿ ಅವರನ್ನು ಮಾರ್ಚ್ 6ರವರೆಗೆ ಸಿಬಿಐ ವಶಕ್ಕೆ ನೀಡಿತ್ತು.