ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಬಹುಕೋಟಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಉದ್ಯೋಗಿಗಳ ವೇತನದ ಮೇಲಿನ ತೆರಿಗೆ ಹಣವನ್ನು ಕಡಿತ ಮಾಡಿಕೊಂಡ ಸಂಸ್ಥೆಗಳು ಅದನ್ನು ಇಲಾಖೆಗೆ ಪಾವತಿ ಮಾಡದ ವಂಚನೆ ಮಾಡಿವೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿರುವಂತೆ ಸುಮಾರು 447 ಕಂಪನಿಗಳು ತಮ್ಮ ನೌಕರರ ವೇತನದಿಂದ ತೆರಿಗೆ ಹಣ ಕಡಿತ ಮಾಡಿಕೊಂಡು ಅದನ್ನು ಇಲಾಖೆಗೆ ಪಾವತಿಸದೆ ತಮ್ಮ ಉದ್ಯಮ ಹಿತಾಸಕ್ತಿಗಳಿಗೆ ಬಳಸಿಕೊಂಡಿರುವುದು ಪತ್ತೆಯಾಗಿದೆ. ಈ ರೀತಿ ಬಳಸಿಕೊಂಡ ಹಣದ ಮೌಲ್ಯ ಸುಮಾರು 3200 ಕೋಟಿ ಗೂ ಅಧಿಕ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ತೆರಿಗೆ ಇಲಾಖೆಯ ಟಿಡಿಎಸ್ ವಿಭಾಗ ಈ ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿವೆ ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 276 ಬಿ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದ್ದು, ಕೆಲವು ಪ್ರಕರಣಗಳಲ್ಲಿ ವಾರಂಟ್ ಕೂಡ ಜಾರಿ ಮಾಡಲಾಗಿದೆ. ಅಂತೆಯೇ ಆದಾಯ ತೆರಿಗೆ ಕಾಯ್ದೆಯಡಿ ದಂಡ ಸಹಿತ ಕನಿಷ್ಠ 3 ತಿಂಗಳಿನಿಂದ 7 ವರ್ಷಗಳ ವರೆಗೆ ಕಠಿಣ ಶಿಕ್ಷೆ ವಿಧಿಸು ಅವಕಾಶವಿದೆ ಎನ್ನಲಾಗಿದೆ. ಇದರ ಜತೆಗೆ ಈ ಕಂಪನಿಗಳ ವಿರುದ್ಧ ವಂಚನೆ ಹಾಗೂ ವಿಶ್ವಾಸದ್ರೋಹದ ಪ್ರಕರಣಗಳನ್ನೂ ದಾಖಲಿಸಲು ಐಟಿ ಇಲಾಖೆ ಚಿಂತನೆ ನಡೆಸಿದೆ.
ತೆರಿಗೆ ಇಲಾಖೆ ಮೂಲಗಳು ತಿಳಿಸಿರುವಂತೆ ಈ ರೀತಿ ವಂಚನೆ ಮಾಡಿರುವ ತಪ್ಪಿತಸ್ಥರಲ್ಲಿ ಗಣ್ಯ ರಾಜಕೀಯ ಮುಖಂಡರೊಬ್ಬರ ಜತೆಗೆ ಸಂಪರ್ಕವಿರುವ ಬಿಲ್ಡರ್‌ಗಳೂ ಕೂಡ ಇದ್ದಾರೆ. ಒಬ್ಬ ಬಿಲ್ಡರ್ ತನ್ನ ನೌಕರರಿಂದ ಟಿಡಿಎಸ್ ನೆಪದಲ್ಲಿ 100 ಕೋಟಿ ರೂ.ಗಳನ್ನು ಸಂಗ್ರಹಿಸಿ ತನ್ನ ಉದ್ಯಮದ ವ್ಯವಹಾರಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ಚಿತ್ರ ನಿರ್ಮಾಣ ಸಂಸ್ಥೆಗಳು, ಮೂಲಸೌಲಭ್ಯ ನಿರ್ಮಾಣ ಕಂಪನಿಗಳು, ಸ್ಟಾರ್ಟಪ್‌ಗಳು ಮತ್ತು ರಾತ್ರಿ ವಿಮಾನ ಹಾರಾಟ ಸಂಸ್ಥೆಗಳೂ ಕೂಡ ಈ ವಂಚಕರ ಗುಂಪಿನಲ್ಲಿ ಸೇರಿವೆ.
ಬಂದರು ಅಭಿವೃದ್ಧಿಯ ಭಾಗವಾಗಿರುವ ಮೂಲಸೌಕರ್ಯ ಕಂಪನಿಯೊಂದು 14 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಐಟಿ ಸೊಲ್ಯೂಷನ್ಸ್ ಪೂರೈಸುವ ಬಹುರಾಷ್ಟ್ರೀಯ ಕಂಪನಿಯೊಂದು 11 ಕೋಟಿ ರೂ.ಗಳನ್ನು ವಂಚಿಸಿದೆ. ಇತ್ತೀಚೆಗೆ ನಡೆಸಿದ ಪರಿಶೀಲನೆಯ ವೇಳೆ 447 ಕಂಪನಿಗಳು ಒಟ್ಟು 3,200 ಕೋಟಿ ರೂ.ಗಳನ್ನು ತಮ್ಮ ನೌಕರರ ವೇತನದಿಂದ ಟಿಡಿಎಸ್ ರೂಪದಲ್ಲಿ ಕಡಿತ ಮಾಡಿಕೊಂಡಿವೆ; ಆದರೆ ತೆರಿಗೆ ಇಲಾಖೆಗೆ ಪಾವತಿಸಿಲ್ಲ' ಎಂದು ಐಟಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾರೆ.
2017ರ ಏಪ್ರಿಲ್‌ನಿಂದ 2018ರ ಮಾರ್ಚ್ ವರೆಗಿನ ಅವಧಿಯ ಲೆಕ್ಕಾಚಾರದಂತೆ ಈ ವಂಚನೆ ಪತ್ತೆಯಾಗಿದ್ದು, ಶೀಘ್ರವೇ ಕೆಲವು ವಂಚಕರನ್ನು ಬಂಧಿಸಲಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಲಾಖೆ ಈಗಾಗಲೇ ಕೆಲವು ಕಂಪನಿಗಳ ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಿದೆ. ಹಲವು ಪ್ರಕರಣಗಳಲ್ಲಿ ಟಿಡಿಎಸ್ ಹಣವನ್ನು ಮರುಬಂಡವಾಳವಾಗಿ ಹೂಡಲಾಗಿದೆ. ಕೆಲವರು ಈಗಾಗಲೇ ಕ್ಷಮೆಯಾಚಿಸಿದ್ದು, ತೆರಿಗೆ ಹಣ ಪಾವತಿಸುವುದಾಗಿ ಭರವಸೆ ನೀಡಿವೆ. ಇನ್ನು ಕೆಲವರು ಪ್ರತಿಕೂಲ ಮಾರುಕಟ್ಟೆ ಸ್ಥಿತಿಯಿಂದಾಗಿ ತೆರಿಗೆ ಪಾವತಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಂಗ್ರಹಿಸಲಾದ ಟಿಡಿಎಸ್‌ನಲ್ಲಿ ಶೇ 50ರಷ್ಟು ಮೊತ್ತವನ್ನು ಸರಕಾರಕ್ಕೆ ಪಾವತಿಸಿದ್ದು, ಉಳಿದ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ' ಎಂದು ಅಧಿಕಾರಿ ವಿವರಿಸಿದರು. ಈಗ ಪ್ರತಿಯೊಂದು ವ್ಯವಹಾರವೂ ಡಿಜಿಟಲೀಕರಣಗೊಂಡಿರುವುದರಿಂದ ವಂಚಕರು ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.