ದೇಶ

ಕೆಸಿಆರ್ ತೃತೀಯ ರಂಗಕ್ಕೆ ಮಮತಾ ಬ್ಯಾನರ್ಜಿ, ಒವೈಸಿ ಬೆಂಬಲ

Lingaraj Badiger
ಹೈದರಾಬಾದ್: 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೃತೀಯ ರಂಗ ರಚಿಸುವ ಅಗತ್ಯ ಇದ್ದು, ತಾವು ತೃತೀಯ ರಂಗದ ಸಾರಥ್ಯ ವಹಿಸಲು ಸಿದ್ಧ ಎಂದು  ಹೇಳಿದ್ದ ಟಿಆರ್ ಎಸ್ ಅಧ್ಯಕ್ಷ ಹಾಗೂ ತೆಲಂಗಾಣ  ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎಂಐಎಂ  ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.
ಬೆಳಗ್ಗೆಯಿಂದ ದೇಶದ ವಿವಿಧ ಭಾಗಗಳಿಂದ ನನಗೆ ದೂರವಾಣಿ ಕರೆಗಳು ಬರುತ್ತಿವೆ. ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕರೆ ಮಾಡಿದ್ದರು. ಅವರು ನೀವು ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು, ನಿಮಗೆ ನನ್ನ ಬೆಂಬಲವಿದೆ ಎಂದು ಹೇಳಿರುವುದಾಗಿ ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ.
ದೇಶವನ್ನು ಆಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ವಿಫಲವಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ  ಗುಣಾತ್ಮಕ ಬದಲಾವಣೆಯಾಗಬೇಕಾದ  ಅವಶ್ಯವಾಗಿದೆ  ಎಂದು ಹೇಳಿದರು.
ಜನ ಬಯಸಿದರೆ ಹೊಸ ರಂಗದ ಸಾರಥ್ಯ ವಹಿಸಲು ತಾವು ಸಿದ್ಧ ಎಂದು ಹೇಳಿದ ಅವರು, ಇದು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಗತ್ಯ ಬಿದ್ದರೆ ದೇಶದಲ್ಲಿ ರಾಜಕೀಯ ಬದಲಾವಣೆಯ ಚರ್ಚೆ ಹುಟ್ಟುಹಾಕುವ ಅಭಿಯಾನಕ್ಕಾಗಿ ರಾಷ್ಟ್ರಪ್ರವಾಸ ಕೈಗೊಳ್ಳಲು ಸಿದ್ಧ ಎಂದು ಹೇಳಿದ್ದರು.
SCROLL FOR NEXT