ದೇಶ

ಆಯೋಧ್ಯ ವಿವಾದ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ 2ನೇ ಬಾರಿಗೆ ರವಿಶಂಕರ್ ಗೂರೂಜಿ ಮನವಿ

Nagaraja AB

ಆಯೋಧ್ಯ : ರಾಮ ಜನ್ಮಭೂಮಿ ವಿವಾದವನ್ನು    ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಆರ್ಟ್ ಆಫ್ ಲೀವಿಂಗ್ ಸ್ಥಾಪಕ ರವಿಶಂಕರ್ ಗುರೂಜಿ ಎರಡನೇ ಬಾರಿಗೆ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳದಿದ್ದರೆ ಭಾರೀ ಪ್ರಮಾಣದ ಕೋಮುಗಲಭೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಿಗೆ ಬಹಿರಂಗ ಪತ್ರ ಬರೆದಿದ್ದು, ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದರಿಂದ ಉಭಯ ಕೋಮು ಜಯಗಳಿಸಿದಂತಾಗುತ್ತದೆ. ಇಲ್ಲದೆ ಹೋದರೆ ಅಪಾರ ಪ್ರಮಾಣದ ಹಿಂದೂ, ಮುಸ್ಲಿಂರ ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಪರಸ್ಪರ ನಂಬಿಕೆಯಿಂದ ಸೂಕ್ತ ನಿರ್ಧಾರ ಕೈಗೊಳ್ಳಿ, ಇಲ್ಲದಿದ್ದರೆ  ನಾಗರಿಕ ಯುದ್ದದ ಮೂಲಕ ದೇಶವನ್ನು ಅವನತ್ತಿಯತ್ತ ಕೊಂಡೊಯ್ಯಲಾಗುತ್ತದೆ ಎಂದು ಅವರು ಉಭಯ ಕೋಮಿನ ನಾಯಕರಿಗೆ ಬರೆದಿರುವ ಪತ್ರದಲ್ಲಿ  ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆ ಬಗೆಹರಿಸುವ ಸಂಬಂಧ ನಾಲ್ಕು ಸಾಧ್ಯತೆಗಳನ್ನು ರವಿಶಂಕರ್ ಗೂರೂಜಿ ನೀಡಿದ್ದಾರೆ. ಮುಸ್ಲಿಂ ಸಂಸ್ಥೆ  ಒಂದು ಎಕರೆ ಜಮೀನನ್ನು ಹಿಂದೂಗಳಿಗೆ ನೀಡಿ, ಮಸೀದಿ ನಿರ್ಮಾಣಕ್ಕಾಗಿ ಪಕ್ಕದಲ್ಲಿಯೇ ಐದು ಎಕರೆ ಜಮೀನು ಪಡೆಯಬಹುದು. ಇಲ್ಲವಾದರೆ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದರಿಂದ ಬಾಬ್ರಿ ಮಸೀದಿ ಧ್ವಂಸಗೊಳಿಸಿದವರಿಗೆ ಶರಣಾಗತಿ ಎಂಬಂತೆ ಭಾವಿಸಬೇಕಿಲ್ಲ. ದೇಶದ ಜನತೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

SCROLL FOR NEXT