ಎಎಪಿ ಶಾಸಕ ಅಮಾನತುಲ್ಲಾ ಖಾನ್
ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿಗಳ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಎಎಪಿ ಶಾಸಕರಾದ ಅಮಾನತುಲ್ಲಾ ಖಾನ್ ಹಾಗೂ ಪ್ರಕಾಶ್ ಜರ್ವಾಲ್ ಅವರುಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಖಾಲ ವಿಸ್ತರಿಸಿ ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶೆಯಾದ ಶೆಪಾಲಿ ಬರ್ನಾಲಾ ಟಂಡನ್ ಈ ತೀರ್ಪು ನೀಡಿದ್ದು ಇಬ್ಬರ ಶಾಸಕರ ನ್ಯಾಯಾಂಗ ಬಂಧನ ಅವಧಿಯನ್ನು ಮಾ.22ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಇದೀಗ ಇಬ್ಬರೂ ಶಾಸಕರು ದೆಹಲಿಯ ಮಾಂಡೋಲಿ ಜೈಲಿನಲ್ಲಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶದಂತೆ ಪಟಿಯಾಲ ಹೌಕೋರ್ಟ್ ಆವರಣದಲ್ಲಿ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ. ಸಂಸತ್ತಿನ ಚುನಾಯಿತ ಸದಸ್ಯರು, ಶಾಸನ ಸಭೆ ಸದಸ್ಯರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಸುವ ಸಂಬಂಧ ಈ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು ಎಎಪಿ ಶಾಸಕರ ಪ್ರಕರಣ ಸಹ ಮುಂದಿನ ದಿನಗಳಲ್ಲಿ ಇಲ್ಲಿಯೇ ವಿಚಾರಣೆಗೆ ಬರಲಿದೆ ಎಂದು ನ್ಯಾಯಾಲಯದ ಮೂಲಗಳು ಹೇಳಿದೆ.
ವಿಶೇಷವೆಂದರೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲಿನ ಹಲ್ಲೆ ಆರೋಪದಲ್ಲಿ ಬಂಧಿತರಾದ ಇಬ್ಬರೂ ಶಾಸಕರ ಜಾಮೀನು ಅರ್ಜಿ ಇದಾಗಲೇ ಕೆಳ ನ್ಯಾಯಾಲಯದಲ್ಲಿ ತಿರಸ್ಕೃತವಾಗಿದ್ದು ಇದೀಗ ಶಾಸಕರು ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಹೈಕೋರ್ಟ್ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ.