ದೇಶ

1984ರಲ್ಲೇ ಅಂಚೆ ಇಲಾಖೆಯ ಸ್ಟಾಂಪ್ ಮೇಲೆ ಇತ್ತು ಮಗುವಿಗೆ ಸ್ತನ್ಯಪಾನ ಚಿತ್ರ

Lingaraj Badiger
ಇತ್ತೀಚಿಗೆ ಮಲಯಾಳಿ ಪಾಕ್ಷಿಕ 'ಗೃಹಲಕ್ಷ್ಮಿ' ಮುಖಪುಟದಲ್ಲಿ ಪ್ರಕಟವಾದ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರ ತೀವ್ರ ವಿವಾದಕ್ಕೀಡಾಗಿದ್ದು, ದೇಶಾದ್ಯಂತ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಚಿತ್ರದಲ್ಲಿ ಕಾಣಿಸಿಕೊಂಡ ರೂಪದರ್ಶಿ ಜೀಲು ಜೋಸೆಫ್ ವಿರುದ್ಧ ದೂರು ದಾಖಲಾಗಿದೆ. ಆದರೆ 1984ರಲ್ಲೇ ನಮ್ಮ ಸರ್ಕಾರದ ಭಾರತೀಯ ಅಂಚೆ ಇಲಾಖೆಯ ಸ್ಟಾಂಪ್ ಮೇಲೆಯೇ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರ ಇತ್ತು ಎಂಬುದು ಹಲವರಿಗೆ ಗೊತ್ತಿಲ್ಲ. 
ಎದೆಯನ್ನು ಮುಚ್ಚಿಕೊಳ್ಳದೇ ತಾಯಿ ಮಗುವಿಗೆ ಹಾಲುಣಿಸುವ ಚಿತ್ರವಿರುವ ಸ್ಟಾಂಪ್ ಅನ್ನು ಭಾರತೀಯ ಅಂಚೆ ಇಲಾಖೆ 1984ರಲ್ಲೇ ಪ್ರಕಟಿಸಿದೆ. ಹಾಗ ಸ್ಟಾಂಪ್ ಅತಿ ಹೆಚ್ಚಾಗಿ ಬಳಸುತ್ತಿದ್ದ ಕಾಲದಲ್ಲೇ ಅದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಈಗ ಪ್ರಕಟವಾಗಿರುವ ಚಿತ್ರ ಅಶ್ಲೀಲ ಅನ್ನೋದು ಹಲವರ ವಾದ.
ಆ ಸ್ಟಾಂಪ್ ಮೇಲೆ ಮಗುವಿಗೆ ಎದೆಹಾಲು ಉಣಿಸುತ್ತಿರುವ ತಾಯಿಯ ಚಿತ್ರವಿದೆ. ಆಧುನಿಕ ವಿಚಾರಧಾರೆಯುಳ್ಳವರು, ಮುಕ್ತ ಮನಸ್ಸಿನವರು 2018 ರಲ್ಲೂ ಅದನ್ನು ಮುಕ್ತವಾಗಿ ಸ್ವೀಕರಿಸದೇ ಇರುವುದು ನಿಜಕ್ಕೂ ದುರಂತ ಎನ್ನಲಾಗ್ತಿದೆ.
ಭಾರತ ಮಾತ್ರವಲ್ಲದೆ ಸ್ತನ್ಯಪಾನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗ್ರೀಸ್, ಫ್ರಾನ್ಸ್, ಇರಾನ್, ಮೈಯನ್ಮಾರ್, ಪೊಲ್ಯಾಂಡ್ ಮತ್ತು ಇತರೆ ಆಧುನಿಕ ರಾಷ್ಟ್ರಗಳು ಸಹ ಮಗುವಿಗೆ ಸ್ತನ್ಯಪಾನ ಮಾಡುವ ಚಿತ್ರವನ್ನು ಸ್ಟಾಂಪ್ ಮೇಲೆ ಪ್ರಕಟಿಸಿವೆ.
ಭಾರತದ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸಾರ್ಜಜನಿಕವಾಗಿ ತಾಯಿ ಸ್ತನ್ಯಪಾನ ಮಾಡಿಸುವುದು ಸಾಮಾನ್ಯ. ಆದರೆ ಈಗ ನಗರ ಪ್ರದೇಶದ ಮತ್ತು ಆಧುನಿಕ ಜನರು ಗೃಹಲಕ್ಷ್ಮಿ ಕವರ್ ಫೋಟೋಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಫೋಟೋ ಅಶ್ಲೀಲ ಎನ್ನುತ್ತಿರುವವರು 1984ರ ಭಾರತೀಯ ಅಂಚೆ ಇಲಾಖೆಯ ಸ್ಟಾಂಪ್ ಅನ್ನು ಗಮನಿಸಬೇಕು.
SCROLL FOR NEXT