ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: 4 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯೋಕ್ರೋನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಭೇಟಿ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ಪ್ರಸ್ತುತ ರಾಹುಲ್ ಗಾಂಧಿಯವರು ಥೈಲ್ಯಾಂಡ್ ಹಾಗೂ ಸಿಂಗಾಪುರ ದೇಶಗಳ ಪ್ರವಾಸ ಕೈಗೊಂಡಿದ್ದು, ನಾಳೆ ಭಾರತಕ್ಕೆ ವಾಪಾಸಾಗಲಿದ್ದಾರೆ. ಭಾರತಕ್ಕೆ ಆಗಮಿಸಿದ ಬಳಿಕ ಫ್ರಾನ್ಸ್ ಅಧ್ಯಕ್ಷರನ್ನು ರಾಹುಲ್ ಅವರನ್ನು ಭೇಟಿ ಮಾಡಲಿದ್ದು, ಭೇಟಿ ಸಂದರ್ಭದಲ್ಲಿ ರಾಫೇಲ್ ವಿಚಾರ ಕುರಿತು ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
11 ತಿಂಗಳ ಹಿಂದೆ ಕತಾರ್ ಮತ್ತು ಈಜಿಪ್ಟ್ ಗೆ ಮಾರಲಾದ ದರಕ್ಕಿಂತ ರೂ.351 ಕೋಟಿ ಹೆಚ್ಚು ದರಕ್ಕೆ ಫ್ರಾನ್ಸ್ ಭಾರತಕ್ಕೆ ರಾಫೇಲ್ ಯುದ್ಧ ವಿಮಾನಗಳನ್ನು ಮಾರಾಟ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಭಾರತದ ರಕ್ಷಣಾ ಒಪ್ಪಂದಗಳ ಕುರಿತು ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಚರ್ಚೆಗಳನ್ನು ನಡೆಸುವುದಿಲ್ಲ. ರಾಫೇಲ್ ಒಪ್ಪಂದ ದೇಶದ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದೆ. ಇದು ನಮ್ಮ ಆಂತರಿಕ ವಿಚಾರ. ಫ್ರಾನ್ಸ್ ಜೊತೆಗೆ ಸರ್ಕಾರವೇ ಚರ್ಚೆ ನಡೆಸಬೇಕಿದ್ದು, ಕಾಂಗ್ರೆಸ್ ಪಕ್ಷವಲ್ಲ. ಉತ್ತರ ನೀಡುವಂತೆ ನಾವು ಸರ್ಕಾರವನ್ನು ಆಗ್ರಹಿಸುತ್ತೇವೆಯೇ ಹೊರತು ಫ್ರಾನ್ಸ್ ಸರ್ಕಾರವನ್ನಲ್ಲ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ್ ಅವರು ಹೇಳಿದ್ದಾರೆ.
ಯಾವುದೇ ವಸ್ತುವನ್ನು ಖರೀದಿ ಮಾಡುವಾಗ, ಖರೀದಿ ಮಾಡುವ ವ್ಯಕ್ತಿ ಆ ವಸ್ತು ಉತ್ತಮವಾದ್ದುದ್ದೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಮಾಹಿತಿ ತಿಳಿದಿರಬೇಕು. ಮಾರಾಟ ಮಾಡುವವರು ಯಾವಾಗಲೂ ತಮ್ಮ ವಸ್ತುವನ್ನು ಉತ್ತಮವಾಗಿದೆ ಎಂದೇ ಹೇಳುತ್ತಾರೆ. ಖರೀದಿ ಮಾಡುವವರ ತನ್ನ ಜೇಬನ್ನು ನೋಡಿಕೊಂಡು ವಸ್ತುವನ್ನು ಖರೀದಿಸಬೇಕು. ಸರ್ಕಾರ ಹಣವನ್ನು ಹಾಳು ಮಾಡಬಾರದು. ತನ್ನಲ್ಲಿರುವ ಹಣದಲ್ಲಿಯೇ ಉತ್ತಮವಾದ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ದೇಶಕ್ಕೆ ಯಾವುದೇ ರೀತಿಯ ನಷ್ಟಗಳಾಗದಂತೆ ನೋಡಿಕೊಳ್ಳಬೇಕು, ಮ್ಯಾಕ್ರೋನ್ ಅವರು ಇದಕ್ಕೆ ಜವಾಬ್ದಾರಿಯಾಗಿರುವುದಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರಾಗಿರುತ್ತಾರೆ. ಒಪ್ಪಂದದಲ್ಲಿ ಇಬ್ಬರೂ ನಾಯಕರು ವಿಫಲರಾಗಿದ್ದಾರೆಂದು ತಿಳಿಸಿದ್ದಾರೆ.