ಯವತ್ಮಲ್(ಮಹಾರಾಷ್ಟ್ರ): ನೂರಾರು ಸಂಖ್ಯೆಯ ಆಧಾರ್ ಕಾರ್ಡ್ ಗಳನ್ನು ಬಾವಿಗೆ ಎಸೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯ ಬಾವಿಯೊಂದರಲ್ಲಿ ಆಧಾರ್ ಕಾರ್ಡ್ ಗಳು ಪತ್ತೆಯಾಗಿದೆ. ಯುವಕರ ಗುಂಪೊಂದು ಬಾವಿಯನ್ನು ಸ್ವಚ್ಚ ಮಾಡುತ್ತಿದ್ದ ವೇಳೆ ಈ ಕಾರ್ಡ್ ಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾಡಳಿತವು ಘಟನೆ ಸಂಬಂಧ ಸೂಕ್ತ ತನಿಖೆಗೆ ಆದೇಶಿಸಿದೆ. ಅಲ್ಲದೆ ಅಂಚೆ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಶಿಂಧೆ ನಗರದಲ್ಲಿದ್ದ ದೇವಾಲಯವೊಂದರ ಆವರಣದ ಬಾವಿಯನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ಸ್ವಯಂಸೇವಕರಾಗಿದ್ದ ಯುವಕರ ಗುಂಪು ನಿರತವಾಗಿತ್ತು. ಮಾ.11ರಂದು ಈ ಯುವಕರ ಗುಂಪಿಗೆ ಕೆಲವು ಪ್ಲಾಸ್ಟಿಕ್ ಚೀಲಗಳು ದೊರಕಿದ್ದವು. ಆ ಚೀಲಗಳನ್ನು ಬಿಚ್ಚಿ ನೋಡಲು ಅದರಲ್ಲಿ ನಗರದ ಹೊರವಲಯದಲ್ಲಿನ ಲೊಹಾರಾ ಗ್ರಾಮ ನಿವಾಸಿಗಳ ನೂರಾರು ಅಸಲಿ ಆಧಾರ್ ಕಾರ್ಡ್ ಗಳಿರುವುದು ಕಂಡುಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪತ್ತೆಯಾದ ಆಧಾರ್ ಕಾರ್ಡ್ ಗಳಲ್ಲಿ ಬಹುತೇಕ ಕಾರ್ಡ್ ಗಳ ವಾರಸುದಾರರನ್ನು ಗುರುತಿಸಲಾಗದಷ್ಟು ಹಾನಿಗೊಂಡಿದ್ದವು. ಸುಮಾರು 157 ಕಾರ್ಡ್ ಗಳು ಹಾನಿಗೊಳಗಾಗಿದೆ. ಆದರೆ ಈ ಕಾರ್ಡ್ ಗಳಲ್ಲಿ ಅನನ್ಯ ಗುರುತಿನ ಸಂಖ್ಯೆ ಸ್ಪಷ್ಟವಾಗಿ ಕಾಣಿಸಿದೆ. ಸದ್ಯ ಈ ಕಾರ್ಡ್ ಗಳನ್ನು ತಹಶೀಲ್ದಾರ್ ಸಚಿನ್ ಶೇಜಲ್ ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ.
ಯವತ್ಮಲ್ ನ ಕಲೆಕ್ಟರ್ ರಾಜೇಶ್ ದೇಶ್ ಮುಖ್ ಈ ಘಟನೆ ಸಂಬಂಧ ತನಿಖೆ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದ್ದಾರೆ. "ಘಟನೆಗೆ ಕಾರಣರಾದವರನ್ನು ನಾವು ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸುವೆವು" ಕಲೆಕ್ಟರ್ ಹೇಳಿದ್ದಾರೆ.
"ನಗರದ ಇತರೆ ಬಾವಿಗಳನ್ನು ಸಹ ಶೋಧಿಸಲು ನಾನು ಆದೇಶಿಸಿದ್ದೇನೆ. ಆಧಾರ್ ಕಾರ್ಡ್, ಇತರೆ ಅಮೂಲ್ಯ ದಾಖಲೆಗಳೇನಾದರೂ ಅಲ್ಲಿ ಕಂಡುಬಂದರೆ ಅದರ ಸಂಬಂಧ ಕ್ರಮ ಜರುಗಿಸಲು ಅನುಕೂಲವಾಗಲಿದೆ" ತಹಶೀಲ್ದಾರರು ಹೇಳಿದ್ದಾರೆ.
ವಶಪಡಿಸಿಕೊಳ್ಳಲಾದ ಆಧಾರ್ ಕಾರ್ಡ್ ಗಳು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದಿಂದ (ಯುಐಡಿಎಐ) 2011 ಮತ್ತು 2014ರ ನಡುವೆ ವಿತರಿಸಲ್ಪಟ್ಟಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics