ದೇಶ

ಮಾನಹಾನಿ ಪ್ರಕರಣ: ಪಂಜಾಬ್ ಮಾಜಿ ಸಚಿವ ಮಜಿಥಿಯಾ ಕ್ಷಮೆ ಕೇಳಿದ ಕೇಜ್ರಿವಾಲ್

Lingaraj Badiger
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಡ್ರಗ್ಸ್ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದ ಪಂಜಾಬ್ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಕ್ಷಮೆ ಕೇಳಿದ್ದಾರೆ. 
ಮಜಿಥಿಯಾ ಅವರು ಪಂಜಾಬ್ ನಲ್ಲಿ ಡ್ರಗ್ಸ್ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದರು. ಈ ಸಂಬಂಧ ಮಜಿಥಿಯಾ, ಕೇಜ್ರಿವಾಲ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ಆಧಾರ ರಹಿತ ಆರೋಪಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಕ್ಷಮೆ ಕೇಳಿ ಪತ್ರ ಬರೆದಿದ್ದು, ಅದನ್ನು ಮಜಿಥಿಯಾ ಅವರು ಇಂದು ಕೋರ್ಟ್ ಗೆ ಸಲ್ಲಿಸಿದ್ದಾರೆ.
ಇತ್ತೀಚಿಗೆ ಡ್ರಗ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಕೆಲವು ಹೇಳಿಕೆ ಮತ್ತು ಆರೋಪಗಳನ್ನು ಮಾಡಿದ್ದೆ. ಬಳಿಕ ಅದು ರಾಜಕೀಯ ತಿರುವು ಪಡೆದುಕೊಂಡಿತ್ತು. ಆದರೆ ಆ ಆರೋಪಗಳು ಆಧಾರ ರಹಿತಿ ಎಂಬುದು ಈಗ ನನ್ನ ಅರಿವಿಗೆ ಬಂದಿದ್ದು, ನಿಮ್ಮ ವಿರುದ್ಧದ ಎಲ್ಲಾ ಹೇಳಿಕೆ ಮತ್ತು ಆರೋಪಗಳನ್ನು ಹಿಂಪಡೆಯುತ್ತೇನೆ ಮತ್ತು ಈ ಸಂಬಂಧ ಕ್ಷಮೆ ಕೇಳುವುದಾಗಿ ಕೇಜ್ರಿವಾಲ್ ಲಿಖಿತವಾಗಿ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಮಾದಕ ವಸ್ತು ದಂಧೆಯಲ್ಲಿ ಮಜಿಥಿಯಾ ಭಾಗಿಯಾಗಿದ್ದು, ಆರೋಪಿಗಳಿಗೆ ಹಲವು ಬಾರಿ ತಮ್ಮ ಅಮೃತಸರದ ಮನೆಯಲ್ಲಿ ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಿದ್ದರು.  
ಮಜಿಥಿಯಾ ಅವರು ಕೇಜ್ರಿವಾಲ್ ಮತ್ತು ಆಪ್ ನಾಯಕ ಸಂಜಯ್ ಸಿಂಗ್ ಅವರು ಆಧಾರ ರಹಿತ ಆರೋಪ ಮಾಡುವ ಮೂಲಕ ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
SCROLL FOR NEXT