ನವದೆಹಲಿ: ಉತ್ತರ ಪ್ರದೇಶ, ಬಿಹಾರ ಉಪ ಚುನಾವಣೆಗಳ ಬಿಜೆಪಿ ಸೋಲಿಗೆ ಪ್ರಧಾನಿ ಮೋದಿ ಅವರ ಅಹಂಕಾರವೇ ಕಾರಣ ಎಂದು ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಹೇಳಿದ್ದಾರೆ.
ಉತ್ತರ ಪ್ರದೇಶ, ಬಿಹಾರ ಉಪ ಚುನಾವಣಾ ಫಲಿತಾಂಶ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಬಿಜೆಪಿ ಪಕ್ಷದ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿರುವ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ, ಉಪ ಚುನಾವಣೆ ಸೋಲಿಗೆ ಪ್ರಧಾನಿ ಮೋದಿ ಅಹಂಕಾರವೇ ಕಾರಣ ಎಂದು ಕಿಡಿಕಾರಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಅಹಂಕಾರ ಮತ್ತು ಪಕ್ಷ ಗೆದ್ದೇ ಗೆಲುತ್ತದೆ ಎಂಬ ಅತಿಯಾದ ಆತ್ಮ ವಿಶ್ವಾಸ ಪಕ್ಷದ ಇಂದಿನ ಸೋಲಿಗೆ ಕಾರಣ. ಪ್ರಧಾನಿ ಮೋದಿ ಅವರ ಮುಂಗೋಪದಿಂದಾಗಿ ಪಕ್ಷಕ್ಕೆ ಹಾನಿಯಾಗುತ್ತಿದ್ದು, ಈ ಬಗ್ಗೆ ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಅಹಂಕಾರ, ಅತಿಯಾದ ಆತ್ಮವಿಶ್ವಾಸ ಮತ್ತು ಮುಂಗೋಪ ಎಂದಿಗೂ ಒಳ್ಳೆಯದಲ್ಲ. ಇದು ಪ್ರಧಾನಿ ಮೋದಿ ಅವರಿಗಷ್ಟೇ ಅಲ್ಲ, ಪಕ್ಷಕ್ಕೂ ತೀರಲಾರದ ಹಾನಿಯನ್ನುಂಟು ಮಾಡುತ್ತದೆ. ಈ ಮೂರು ಲಕ್ಷಣಗಳು ಪ್ರಜಾಪ್ರಭುತ್ವ ರಾಜಕೀಯದ ದೊಡ್ಡ ಹಂತಕ ಗುಣಗಳಾಗಿವೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರ ವಿರುದ್ಧ ಕಿಡಿಕಾರಿರುವ ಸಿನ್ಹಾ, ಬಿಜೆಪಿ ಹಿರಿಯ ಮುಖಂಡರು ತಮ್ಮ ಸೀಟ್ ಬೆಲ್ಟ್ ಗಳನ್ನು ಭದ್ರಪಡಿಸಿಕೊಳ್ಳುವ ಮೂಲಕ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂದು ಹೇಳುವ ಮೂಲಕ ಸ್ವಕ್ಷೇತ್ರದಲ್ಲಿ ಯೋಗಿ ಆದಿತ್ಯಾನಾಥ್ ಅವರಿಗಾದ ಸೋಲು ನಾಳೆ ನಿಮ್ಮ ಕ್ಷೇತ್ರದಲ್ಲೂ ಆಗಬಹುದು ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಪಕ್ಷದಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೇ ಇದ್ದರೆ 2019ರ ಲೋಕಸಭಾ ಚುನಾವಣೆ ಕಠಿಣವಾಗಲಿದೆ ಎಂದು ಸಿನ್ಹಾ ಎಚ್ಚರಿಕೆ ನೀಡಿದ್ದಾರೆ.