ರೊಟೊಮ್ಯಾಕ್ ವಂಚನೆ ಪ್ರಕರಣ: ಸಿಬಿಐ ನ್ಯಾಯಾಲಯದಿಂದ ವಿಕ್ರಂ ಕೊಠಾರಿ ಮತ್ತು ಪುತ್ರನಿಗೆ ಜಾಮೀನು ನಕಾರ
ಲಖನೌ: 3,695 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ರೊಟೊಮ್ಯಾಕ್ ಸಂಸ್ಥೆಯ ನಿರ್ದೇಶಕ ವಿಕ್ರಮ್ ಕೊಠಾರಿ ಹಾಗೂ ಆತನ ಪುತ್ರ ರಾಹುಲ್ ಅವರ ನಿಯಮಿತ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಇದಕ್ಕೂ ಹಿಂದೆ ವಿಕ್ರಂ ಸಲ್ಲಿಸಿದ್ದ ಮಧ್ಯಂತರ ಜಾಮೀನಿನ ಅರ್ಜಿಯನ್ನು ಸಹ ನ್ಯಾಯಾಲಯ ತಿರಸ್ಕರಿಸಿತ್ತು. ಮಾ.7ರಂದು ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿತ್ತು.
ಪ್ರಕರಣ ಸಂಬಂಧ ವಿಕ್ರಂ ಕೋಠಾರಿ ಮತ್ತು ಆತನ ಪುತ್ರರನ್ನು ಫೆಬ್ರವರಿ 23 ರಂದು ದೆಹಲಿಯಲ್ಲಿ ಬಂಧಿಸಲಾಗಿದ್ದು ಬಳಿಕ ಅವರನ್ನು ಲಖನೌಗೆ ಕರೆತರಲಾಗಿತ್ತು. ಇದೀಗ ಆರೋಪಿಗಳು ಸಿಬಿಐ ವಶದಲ್ಲಿದ್ದಾರೆ.
ಪ್ರಕರಣ ಗಂಭೀರವಾದುದಾಗಿದೆ, ಜಾಮೀನಿಗೆ ಅರ್ಹವಾಗಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದೆ.
ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಏಳು ಬ್ಯಾಂಕ್ ಗಳ ಒಕ್ಕೂಟ 2008 ರಿಂದ ರೊಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಗೆ 2,919 ಕೋಟಿ ರೂ. ಸಾಲವನ್ನು ವಿತರಣೆ ಮಾಡಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿದೆ.