ತಮಿಳುನಾಡು ಅರಣ್ಯ ಕಾಡ್ಗಿಚ್ಚು
ಮಧುರೈ: ತಮಿಳುನಾಡು ಕುರಂಕಣಿ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಪ್ರಕರಣ ಸಂಬಂಧ ಪ್ರವಾಸ ಆಯೋಜಕನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಗುರುವಾರ ತಿಳಿದುಬಂದಿದೆ.
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಸಮೀಪದ ಕಿತಾತುಕಡವು ಮೂಲದವರಾಗಿರುವ ದಿವ್ಯಾ ಎಂಬುವವರು ತಮ್ಮ ಪತಿ ವಿಬಿನ್ ಎಂಬುವವರನ್ನು ಕರೆದುಕೊಂಡು ಕುರಂಕಣಿ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆಂದು ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿ, ವಿಬಿನ್ ಅವರು ಸಾವನ್ನಪ್ಪಿದ್ದರು. ಕಾರ್ಯಾಚರಣಿಗಿಳಿದಿದ್ದ ರಕ್ಷಣಾ ಪಡೆಗಳು ವಿಬಿನ್ ಮೃತದೇಹವನ್ನು ಹೊರತೆಗೆದಿದ್ದು. ದಿವ್ಯಾ ಅವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿತ್ತು.
ಅಲ್ಲದೆ ದಿವ್ಯಾ ಅವರಿಗೆ ಹೃದಯ ಸ್ತಂಭನವುಂಟಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ ದಿವ್ಯಾ ಅವರು ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಪ್ರಕರಣ ಸಂಬಂಧ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಪ್ರವಾಸಿ ಆಯೋಜಕನಾಗಿದ್ದ ಪ್ರಭು (42) ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆಯೇ ಚಾರಣಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಪ್ರಭು ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.