ದೇಶ

ಅರವಿಂದ್ ಕೇಜ್ರಿವಾಲ್ ಕ್ಷಮಾಪಣೆ: ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮನ್ ರಾಜೀನಾಮೆ

Raghavendra Adiga
ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ದ ಪಂಜಾಬ್ ರಾಜ್ಯ ಘಟಕ ಅಧ್ಯಕ್ಷ ಮತ್ತು ಸಂಗರೂರ್ ಸಂಸದರಾದ ಭಗವಂತ್ ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ನ ಮಾಜಿ ಸಚಿವ ಮಜಿಥಿಯಾ ಕ್ಷಮೆ ಕೋರಿದ ಒಂದು ದಿನದ ತರುವಾಯ ಭಗವಂತ್ ಅಧ್ಯಕ್ಷ ಪದವಿ ತ್ಯಾಗ ಮಾಡಿದ್ದಾರೆ.
"ನಾನು ಪಂಜಾಬ್ ಎಎಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ ಪಂಜಾಬಿನಲ್ಲಿ ನಡೆಯುತ್ತಿರುವ ಎಲ್ಲಾ ವಿಧದ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ಪಂಜಾಬಿನ ಓರ್ವ ಆಮ್ ಆದ್ಮಿಯಾಗಿ ನಾನು ಮುಂದುವರಿಯುತ್ತೇನೆ." ಮನ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಡ್ರಗ್ಸ್ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದ ಪಂಜಾಬ್ ಮಾಜಿ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಕ್ಷಮೆಯಾಚಿಸಿದ್ದರು.
ಇತ್ತೀಚಿಗೆ ಡ್ರಗ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಕೆಲವು ಹೇಳಿಕೆ ಮತ್ತು ಆರೋಪಗಳನ್ನು ಮಾಡಿದ್ದೆ. ಬಳಿಕ ಅದು ರಾಜಕೀಯ ತಿರುವು ಪಡೆದುಕೊಂಡಿತ್ತು. ಆದರೆ ಆ ಆರೋಪಗಳು ಆಧಾರ ರಹಿತಿ ಎಂಬುದು ಈಗ ನನ್ನ ಅರಿವಿಗೆ ಬಂದಿದ್ದು, ನಿಮ್ಮ ವಿರುದ್ಧದ ಎಲ್ಲಾ ಹೇಳಿಕೆ ಮತ್ತು ಆರೋಪಗಳನ್ನು ಹಿಂಪಡೆಯುತ್ತೇನೆ ಮತ್ತು ಈ ಸಂಬಂಧ ಕ್ಷಮೆ ಕೇಳುವುದಾಗಿ ಕೇಜ್ರಿವಾಲ್ ನಿನ್ನೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ್ದರು. 
ಶಿರೋಮಣಿ ಅಕಾಲಿ ದಳ (ಎಸ್ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಸೋದರರಾದ ಮಜಿಥಿಯಾ ಕೇಜ್ರಿವಾಲ್ ವಿರುದ್ಧ ಅಮ್ತಸರ್ ನ್ಯಾಯಾಲಯದಲ್ಲಿ ಮೇ 20, 2015 ರಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 
SCROLL FOR NEXT