ಪಾಟ್ನಾ: ಬಿಹಾರ ಉಪಚುನಾವಣಾ ಫಲಿತಾಂಶ ಘೋಷಣೆ ಬಳಿಕ ಅರಾರಿಯಾದಲ್ಲಿ ಸಂಭವಿಸಿದ್ದ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ಉಪ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಉಪಚುನಾವಣೆ ನಡೆದಿದ್ದ ಅರಾರಿಯಾದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಈ ವೇಳೆ ಒಂದು ಗುಂಪಿನಲ್ಲಿದ್ದ ದುಷ್ಕರ್ಮಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಮಾತ್ರವಲ್ಲದೇ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿೇ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಅರಾರಿಯಾ ದೇಶದ ಭಯೋತ್ಪಾದನಾ ತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ಬಿಹಾರ ಪೊಲೀಸರು ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಹಮದ್ ಶೆಹಜಾದ್ ಮತ್ತು ಮಹಮದ್ ಸುಲ್ತಾನ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮಾತ್ರವಲ್ಲದೇ ಇನ್ನೂ ಹಲವರ ಹೆಸರು ಎಫ್ ಐಆರ್ ನಲ್ಲಿ ಉಲ್ಲೇಖವಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಮಹಮದ್ ಅಬಿದ್ ನಾಪತ್ತೆಯಾಗಿದ್ದು, ಅಬಿದ್ ಸೇರಿದಂತೆ ಉಳಿದವರ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.