ಅನಿಲ್ ಬೈಜಾಲ್ - ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ನೀಡುವ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ತಿರಸ್ಕರಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ. ಅಲ್ಲದೆ 'ಕ್ಷುಲ್ಲಕ ರಾಜಕೀಯಕ್ಕೆ' ಮಹತ್ವದ ಯೋಜನೆ ಬಲಿಯಾಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಮಾತು ಕೇಳಿಸಿಕೊಳ್ಳಿ ಎಂದು ನಾನು ಹಲವು ಬಾರಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮನವಿ ಮಾಡಿದ್ದೆ. ಆದರೆ ಅವರು ಕೇಳಿಸಿಕೊಳ್ಳಲಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪಡಿತರವನ್ನು ಸೀಲ್ ಮಾಡಿದ ಪಾಕೇಟ್ ಗಳಲ್ಲಿ ಮನೆ ಬಾಗಿಲಿಗೇ ವಿತರಿಸಲು ದೆಹಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು, ದೆಹಲಿಯ ಬಡ ಜನತೆಯ ಪರದಾಟವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಮಾಡಿದ್ದಾರೆ.
ಪಡಿತರ ಕಳ್ಳತನ, ಕಳಪೆ ಗುಣಮಟ್ಟದ ಪಡಿತರ ಹಾಗೂ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ದೆಹಲಿ ಈ ಹೊಸ ಯೋಜನೆ ಜಾರಿಗೆ ತರುತ್ತಿರುವುದಾಗಿ ಹೇಳಿದ್ದರು.