ನವದೆಹಲಿ: ಭಾರತೀಯ ಚುನಾವಣಾ ಪ್ರಕ್ರಿಯೆ ಮೇಲೆ ಯಾವುದೇ ರೀತಿಯ ಅನಪೇಕ್ಷಿತ ಪ್ರಭಾವ ಬೀರುವ ಘಟನೆಗಳು ಕಾಣಿಸಿದರೆ ಫೇಸ್ ಬುಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಸಂಸತ್ ಕಲಾಪದಲ್ಲಿ ಇಂದು ಮಾತನಾಡಿದ ರವಿಶಂಕರ್ ಪ್ರಸಾದ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸೋರಿಕೆ ವಿಚಾರವನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದರು. ಈ ವೇಳೆ ಭಾರತೀಯ ಚುನಾವಣಾ ಪ್ರಕ್ರಿಯೆ ಮೇಲೆ ಯಾವುದೇ ರೀತಿಯ ಅನಪೇಕ್ಷಿತ ಪ್ರಭಾವ ಬೀರುವುದನ್ನು ನಾವು ಸಹಿಸುವುದಿಲ್ಲ. ಇಂತಹ ಕ್ರಮ ಕಂಡು ಬಂದರೆ ಫೇಸ್ ಬುಕ್ ವಿರುದ್ಧವೂ ಯಾವುದೇ ರೀತಿಯ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಅಮೆರಿಕದ ತನಿಖಾ ಸಂಸ್ಥೆಯೊಂದು ಫೇಸ್ ಬುಕ್ ದತ್ತಾಂಶ ಸೋರಿಕೆ ಕುರಿತು ವರದಿ ಮಾಡಿತ್ತು. ಅಲ್ಲದೆ ಮಾಹಿತಿ ಸೋರಿಕೆ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಎಂಬ ಸಂಸ್ಥೆಯ ಕೈವಾಡವಿದೆ ಎಂದೂ ಆರೋಪಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಫೇಸ್ ಬುಕ್ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದೆ.
"ಭಾರತೀಯ ಚುನಾನಣಾ ಪ್ರಕ್ರಿಯೆ ಮೇಲೆ ಯಾವುದೇ ರೀತಿಯ ಅನಪೇಕ್ಷಿತ ಪ್ರಭಾವ ಬೀರುವ ಘಟನೆಗಳು ಕಂಡುಬಂದರೆ ಫೇಸ್ ಬುಕ್ ಕೂಡ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಆದ್ಯತೆ ಎಂದೂ ಇರುತ್ತದೆ. ಆದರೆ ಅದರ ದುರ್ಬಳಕೆಗೆ ಅಲ್ಲ. ಹೀಗಾಗಿ ಅಂತಹ ಯಾವುದೇ ಪ್ರಯತ್ನಗಳು ಕಂಡು ಬಂದರೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಫೇಸ್ ಬುಕ್ ಮಾಹಿತಿ ಸೋರಿಕೆಯಲ್ಲಿ 'ಕೈ' ವಾಡ?
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ರವಿಶಂಕರ್ ಪ್ರಸಾದ್ ಅವರು, ಫೇಸ್ ಬುಕ್ ದತ್ತಾಂಶ ಸೋರಿಕೆ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡದ ಕುರಿತು ಶಂಕೆ ವ್ಯಕ್ತಪಡಿಸಿದರು. ಫೇಸ್ ಬುಕ್ ನ ದತ್ತಾಂಶವನ್ನು ಕೇಂಬ್ರಿಡ್ಜ್ ಅನಲಿಟಿಕಾ ಎಂಬ ಸಂಸ್ಥೆ ಸೋರಿಕೆ ಮಾಡಿದ್ದು, 2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಈ ಸಂಸ್ಥೆ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಸಂಸ್ಥೆಗೆ ಇದೀಗ ಕಾಂಗ್ರೆಸ್ ಪಕ್ಷ ಗ್ರಾಹಕನಾಗಿದ್ದು, ದತ್ತಾಂಶ ಸೋರಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಗೂ ಸಂಬಂಧವಿದೆ ಎಂದು ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ದತ್ತಾಂಶ ತಿರುಚುವಿಕೆಯಲ್ಲಿ ತೊಡಗಿದ್ದು, ದತ್ತಾಂಶ ಕಳ್ಳತನದಲ್ಲಿ ತೊಡಗಿದೆ. ಆ ಮೂಲಕ ವಾಮಮಾರ್ಗದಲ್ಲಿ 2019 ರ ಲೋಕಸಭಾ ಚುನಾವಣೆ ಗೆಲ್ಲಲು ವಾಮಮಾರ್ಗ ಅನುಸರಿಸುತ್ತಿದೆ. ಹಣದ ಆಮಿಷ, ಲಂಚ ಮತ್ತು ವೇಶ್ಯೆಯರ ಮೂಲಕ ಫೇಸ್ ಬುಕ್ ದತ್ತಾಂಶ ಸೋರಿಕೆ ಮಾಡಲಾಗುತ್ತಿದೆ. ನಿಮಗೂ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಗೂ ಏನು ಸಂಬಂಧ ಎಂದು ರವಿಶಂಕರ್ ಪ್ರಸಾದ್ ವ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics