ನವದೆಹಲಿ: ವೋಟ್ ಬ್ಯಾಂಕ್ ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಅವರನ್ನು ರಾಹುಲ್ ಗಾಂಧಿ ಹೊಗಳಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದುರಾದೃಷ್ಟಕರವೆಂದರೆ, ವೋಟ್ ಬ್ಯಾಂಕಿಗಾಗಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆಂದು ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಎಷ್ಟು ಹಿಂದೂಗಳ ಮಾರಣಹೋಮ ಮಾಡಿದ್ದಾನೆ ಮತ್ತು ಆತ ಎಂತಹ ಕ್ರೂರ ದೊರೆ ಎಂಬುದು ತಿಳಿದಿದ್ದರೂ ಆತನನ್ನು ಮಹಾನ್ ನಾಯಕ ಎಂದು ಹೇಳುತ್ತಿದ್ದಾರೆ. ಅವರು ಇನ್ನು ಮುಂದೆ ತುಘಲಕ್ ದಿನಾಚರಣೆ ಆಚರಿಸಿದರೂ ಅಚ್ಚರಿಯೇನಿಲ್ಲ ಎಂದು ಕಿಡಿಕಾರಿದ್ದಾರೆ.
ಕರ್ನಾಟದ ಜನಾಶೀರ್ವಾದ ಯಾತ್ರೆ ನಿಮಿತ್ತ ಕರ್ನಾಟಕ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನಿನ್ನೆಯಷ್ಟೇ ಟಿಪ್ಪು ಸುಲ್ತಾನ್ ಅವರನ್ನು ಹೊಗಳಿದ್ದರು. ಟಿಪ್ಪು ಸುಲ್ತಾನ್ ಕೋಮು ಸೌಹಾರ್ದತೆಯ ಪ್ರತೀಕವಾಗಿ ನಿಲ್ಲುತ್ತಾರೆಂದು ಹೇಳಿದ್ದರು.