ದೇಶ

ಉತ್ತರ ಪ್ರದೇಶ: ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದ 131 ಪ್ರಕರಣ ವಾಪಸ್

Lingaraj Badiger
ಲಖನೌ: 2013ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿದ್ದ 131 ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಗುರುವಾರ ಚಾಲನೆ ನೀಡಿದೆ. ಆದರೆ ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ರಾಜಕೀಯ ಪ್ರೇರಿತ ವಾಗಿ ದಾಖಲಿಸಲಾದ 20 ಸಾವಿರ ಪೊಲೀಸ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿರುವುದಾಗಿ ಕಳೆದ ವರ್ಷ ಉತ್ತರ ಪ್ರದೇಶ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿತ್ತು. ಇದೀಗ ಹತ್ಯೆ, ಹತ್ಯೆ ಯತ್ನ ಮತ್ತು ಅಪಹರಣ ಪ್ರಕರಣ ಸೇರಿದಂತೆ ವಾಪಸ್ ಪಡೆಯುವ ಪ್ರಕರಣಗಳ ಪಟ್ಟಿಯನ್ನು ಉತ್ತರ ಪ್ರದೇಶ ಸರ್ಕಾರ ಸಿದ್ಧಪಡಿಸಿದೆ.
ಕಳೆದ ಜನವರಿಯಲ್ಲಿ ಬುಲಂದ್ ಶಹರ್ನಲ್ಲಿ ನಡೆದ ಹಿಂದು-ಮುಸ್ಲಿಂ ಪಂಚಾಯ್ತಿಯಲ್ಲಿ ರಾಜಿ ಸಂಧಾನದ ಮೂಲಕ 20 ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಇದರ ಬೆನ್ನಲ್ಲೇ ಮುಜಾಫರ್ ನಗರದ ಖಾಪ್ ಜೌಧರಿಗಳು ಮುಜಾಫರ್ ನಗರ ಬಿಜೆಪಿ ಸಂಸದ ಸಂಜೀವ್ ಬಾಲ್ಯಾನ್ ಅವರ ನೇತೃತ್ವದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, 171 ಕ್ಷುಲ್ಲಕ ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು.
ಆರೋಪಿಗಳನ್ನು ಬಂಧಿಸಲು ಮನೆಗೆ ಬಂದ ಪೊಲೀಸರ ತಡೆದ ಎಂಟು ಮಹಿಳೆಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಬಾಲ್ಯಾನ್ ನೇತೃತ್ವದ ನಿಯೋಗ ತಿಳಿಸಿತ್ತು.
2013ರ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆದ ಮುಜಾಫರ್ ನಗರ ಕೋಮುಗಲಭೆಯಲ್ಲಿ 65ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 40 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಈ ಸಂಬಂಧ ಮುಜಾಫರ್ ನಗರ ಮತ್ತು ಶಾಮ್ಲಿಯಲ್ಲಿ 1,455 ಮಂದಿ ವಿರುದ್ಧ 500 ಪ್ರಕರಣಗಳನ್ನು ದಾಖಲಿಸಲಾಗಿದೆ.
SCROLL FOR NEXT