ಲಖನೌ: ರಾಜ್ಯಸಭೆ ಚುನಾವಣೆಯಲ್ಲಿ ತಲಾ ಒಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಪ್ರತಿಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಮೈತ್ರಿಗೆ ಭಾರಿ ಹಿನ್ನೆಡೆಯಾಗಿದೆ.
ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಎಸ್ಪಿ ಶಾಸಕ ಮುಖ್ತಾರ್ ಅನ್ಸಾರಿ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲು ಅಲಹಬಾದ್ ಹೈಕೋರ್ಟ್ ನಿರಾಕರಿಸಿದೆ.
ಇನ್ನು ಫಿರೋಜಾಬಾದ್ ಜೈಲಿನಲ್ಲಿರುವ ಎಸ್ಪಿ ಶಾಸಕ ಹರಿಓಂ ಯಾದವ್ ಅವರಿಗೂ ಮತದಾನಕ್ಕೆ ಅವಕಾಶ ನೀಡಲು ಫಿರೋಜಾಬಾದ್ ವಿಶೇಷ ಕೋರ್ಟ್ ನಿರಾಕರಿಸಿದೆ.
ನಾಳೆ ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದ್ದು, ಬಿಎಸ್ಪಿಯಿಂದ ಭೀಮ ರಾವ್ ಅಂಬೇಡ್ಕರ್ ಹಾಗೂ ಎಸ್ಪಿಯಿಂದ ಜಯಾ ಬಚ್ಚನ್ ಅವರು ಸ್ಪರ್ಧಿಸಿದ್ದಾರೆ. ವಿಧಾನಸಭೆಯಲ್ಲಿ ಎಸ್ಪಿ 46 ಹಾಗೂ ಬಿಎಸ್ಪಿ 19 ಶಾಸಕರನ್ನು ಹೊಂದಿದೆ. 7 ಕಾಂಗ್ರೆಸ್ ಹಾಗೂ ಒಂದು ಆರ್ ಎಲ್ ಡಿ ಸೇರಿ ಪ್ರತಿಪಕ್ಷಗಳ ಬಲ ಒಟ್ಟು 73 ಇದೆ. ಆದರೆ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ತಲಾ 37 ಮತಗಳ ಅಗತ್ಯವಿದೆ.