ನವದೆಹಲಿ: ಸರ್ಕಾರ ನೀಡಿರುವ ಭದ್ರತೆ ನನ್ನನ್ನು ರಕ್ಷಿಸುವುದಿಲ್ಲ, ಪ್ರತಿಭಟನೆಗೆ ಆಗಮಿಸುತ್ತಿದ್ದ ರೈತರನ್ನು ತಡೆಯುವ ಮೂಲಕ ಕೇಂದ್ರ ಸರ್ಕಾರ ತನ್ನ ಕಪಟತನದ ವರ್ತನೆಯನ್ನು ಬಯಲು ಮಾಡಿದೆ ಎಂದು ಹಿರಿಯ ಸ್ವತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಸಮರ್ಥ ಲೋಕಪಾಲ ನೇಮಕ ಮತ್ತು ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಇಂದಿನಿಂದ ಅಣ್ಣಾ ಹಾಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸುತ್ತಿದ್ದು, ಧರಣಿಯಲ್ಲಿ ಲಕ್ಷಾಂತರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಧರಣಿ ಆರಂಭಕ್ಕೆ ಕ್ಷಣಗಣನೆ ಇರುವಂತೆಯೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅಣ್ಣಾ ಹಜಾರೆ, ಪ್ರತಿಭಟನೆಯನ್ನು ಹತ್ತಿಕ್ಕುವ ಸಂಬಂಧ ರೈತರು ಆಗಮಿಸುತ್ತಿದ್ದ ರೈಲುಗಳನ್ನು ರದ್ದು ಮಾಡಲಾಗಿದ್ದು, ನೀವೇ ಪರೋಕ್ಷವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಇದೇ ವೇಳೆ ನೀವು ನನಗೆ ಪೊಲೀಸರ ಭದ್ರತೆ ನೀಡಿದ್ದೀರಿ, ಆದರೆ ಈ ಹಿಂದೆಯೇ ನಾನು ಸಾಕಷ್ಟು ಪತ್ರಗಳನ್ನು ಬರೆದು ನನಗೆ ಪೊಲೀಸ್ ರಕ್ಷಣೆ ಬೇಡ ಎಂದು ಹೇಳಿದ್ದೆ. ಆದರೂ ಭದ್ರತೆ ನಿಯೋಜಿಸಿದ್ದೀರಿ. ನಿಮ್ಮ ಭದ್ರತೆ ನನ್ನನ್ನು ರಕ್ಷಿಸಲಾರದು. ಪ್ರತಿಭಟನೆಗೆ ಆಗಮಿಸುತ್ತಿದ್ದ ರೈತರನ್ನು ತಡೆಯುವ ಮೂಲಕ ನಿಮ್ಮ ಕಪಟವರ್ತನೆಯನ್ನು ಪ್ರದರ್ಶನ ಮಾಡಿದ್ದೀರಿ, ಇದು ಸರಿಯಲ್ಲ ಎಂದು ಹಜಾರೆ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹ ಇಂದಿನಿಂದ ಆರಂಭವಾಗಲಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಸ್ವಾಮಿನಾಥನ್ ವರದಿ ಅನುಷ್ಠಾನದ ಬೇಡಿಕೆಯೂ ಈ ಹೋರಾಟದ ಹಿಂದಿದೆ. ರಾಜಧಾನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ.