ದೇಶ

ಟಿಟಿವಿ ದಿನಕರನ್ ಗೆ ಪ್ರೆಶರ್ ಕುಕ್ಕರ್ ಚಿನ್ಹೆ; ದೆಹಲಿ ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ

Srinivasamurthy VN
ನವದೆಹಲಿ: ಪ್ರೆಶರ್ ಕುಕ್ಕರ್ ಚಿನ್ಹೆಯನ್ನು ಎಐಎಡಿಎಂಕೆಯ ಉಚ್ಛಾಟಿತ ಮುಖಂಡ ಟಿಟಿವಿ ದಿನಕರನ್ ಗೆ ನೀಡುವ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದು ಮಾಡಿದ್ದು, ಮೊದಲು ಎಐಎಡಿಎಂಕೆ ಬಣಗಳ ಚಿನ್ಹೆ ವಿವಾದವನ್ನು ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದೆ.
ಎಐಎಡಿಎಂಕೆ ಬಣಗಳ ನಡುವೆ ತಾರಕಕ್ಕೇರಿದ್ದ ಎರಡೆಲೆ ಚಿನ್ಹೆಗಾಗಿ ಕಿತ್ತಾಟ ಮತ್ತೆ ಆರಂಭವಾಗುವ ಸಾಧ್ಯತೆ ಇದ್ದು, ದಿನಕರನ್ ಬಣಕ್ಕೆ ನೀಡಲಾಗಿದ್ದ ಕುಕ್ಕರ್ ಚಿನ್ಹೆಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಎಎಂ ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠ ಚಿನ್ಹೆ ವಿವಾದವನ್ನು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಗೆ ಸೂಚನೆ ನೀಡಿದೆ. ಅಲ್ಲದೆ ವಿವಾದದ ಕುರಿತು ಹೈಕೋರ್ಟ್ ನ ಇಬ್ಬರು ನ್ಯಾಯಾಧೀಶರ ನೇತೃತ್ವದಲ್ಲಿ ಪೀಠ ರಚನೆ ಮಾಡಿ ವಿವಾದ ಇತ್ಯರ್ಥ ಮಾಡುವಂತೆ ಸೂಚನೆ ನೀಡಿದೆ. 
ಕಳೆದ ಮಾರ್ಚ್ 9ರಂದು ದೆಹಲಿ ನ್ಯಾಯಾಲಯ ಟಿಟಿವಿ ದಿನಕರನ್ ಗೆ ಪ್ರೆಶರ್ ಕುಕ್ಕರ್ ಚಿನ್ಹೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಇದೇ ಚಿನ್ಹೆಯ ಅಡಿಯಲ್ಲೇ ದಿನಕರನ್ ಆರ್‌.ಕೆ ನಗರ ಉಪ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು.
SCROLL FOR NEXT