ಸಿಬಿಎಸ್ಇ ವಿರುದ್ಧ ಪ್ರತಿಭಟಿಸುತ್ತಿರುವ 10ನೇ ತರಗತಿ ವಿದ್ಯಾರ್ಥಿನಿ
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್'ಸಿ)ಯ 10ನೇ ತರಗತಿ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಪ್ರಕರಣದ ಬೆನ್ನಲ್ಲೇ 12ನೇ ತರಗತಿಯ ಮತ್ತೆರಡು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಸಾಧ್ಯತೆಗಳಿತ್ತು ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
12ನೇ ತರಗತಿಯ ಜೀವಶಾಸ್ತ್ರ ಹಾಗೂ ಅಕೌಂಟನ್ಸಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಸಂಭವವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಆರಂಭದಲ್ಲಿ ಇದನ್ನು ಸಿಬಿಎಸ್ಇ ಒಪ್ಪಿಕೊಂಡಿರಲಿಲ್ಲ. ನಂತರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳಿತ್ತು. ಇದೀಗ ಮತ್ತೊಂದು ಸತ್ಯ ಬಹಿರಂಗಗೊಂಡಿದೆ. ಮಾರ್ಚ್.15ರಂದು ಜೀವಶಾಸ್ತ್ರ ಪರೀಕ್ಷೆ ನಡೆದಿದ್ದು, ಮಾರ್ಚ್ 27 ರಂದು ಅಕೌಂಟನ್ಸಿ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, ಈ ಪ್ರಶ್ನೆಪತ್ರಿಕೆಗಳೂ ಕೂಡ ಸೋರಿಕೆಯಾಗುವ ಸಾಧ್ಯತೆಗಳಿತ್ತು ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದ ವರದಿಯನ್ನು ಸಿಬಿಎಸ್ಇ ಮತ್ತು ಸಚಿವಾಲಯ ತಿರಸ್ಕರಿಸಿತ್ತು. ಅಲ್ಲದೆ, ಇತರೆ ಎರಡು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ ಎಂಬ ವರದಿಗಳು ಬಂದಿದ್ದರೂ ಕೂಡ ಕೇವಲ ಆರ್ಥಶಾಸ್ತ್ರ ಪರೀಕ್ಷೆಯನ್ನು ಮಾತ್ರ ಸಿಬಿಎಸ್ಇ ರದ್ದು ಮಾಡಿತ್ತು. ಇದಕ್ಕೆ ಯಾವುದೇ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ.
ಪರೀಕ್ಷೆಗಳನ್ನು ರದ್ದು ಮಾಡುವ ನಿರ್ಧಾರವನ್ನು ಬುಧವಾರ ಕೈಗೊಳ್ಳಲಾಗಿತ್ತು. ಆದರೆ, ಸೋರಿಕೆಯಾದ ಗಣಿತ ಪ್ರಶ್ನೆಪತ್ರಿಕೆ ಸಾವಿರಾರು ಮೊಬೈಲ್ ಗಳಿಗೆ ತಲುಪಿತ್ತು. ಇದು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಪರೀಕ್ಷೆಗಳನ್ನು ರದ್ದು ಮಾಡಲಾಗಿಯಿತು ಎಂದು ಶಾಲಾ ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ನಾಲ್ಕು ಪುಟಗಳ ಕೈಬರಹವುಳ್ಳ ಉತ್ತರ ಪತ್ರಿಕೆಯೊಂದು ಸೋಮವಾರ ಸಿಬಿಎಸ್ಇಗೆ ಅನಾಮಧೇಯ ಎನ್ವೆಲಪ್ ಒಂದರಲ್ಲಿ ಬಂದಿತ್ತು. ರಾಜೀಂದರ್ ನಗರದಲ್ಲಿ ಕೋಚಿಂಗ್ ತರಗತಿ ನಡೆಯುತ್ತಿರುವ ವ್ಯಕ್ತಿ ಪ್ರಶ್ನಾ ಪತ್ರಿಕೆ ಸೋರಿಕೆ ವ್ಯವಹಾರದಲ್ಲಿ ನಿರತನಾಗಿದ್ದಾನೆ ಎಂಬ ಅನಾಮಧೇಯ ದೂರ ಬಂದಿತ್ತು. ಈ ಸಂಬಂಧ ಸಿಬಿಎಸ್ಇ ದೂರು ದಾಖಲಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಸಿಬಿಎಸ್ಇ 10 ತರಗತಿ ಗಣಿತ ಮತ್ತು 12ನೇ ತರಗತಿ ಅರ್ಥಶಾಸ್ತ್ರ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ದೇಶದ ವಿವಿಧೆಡೆ ಗುರುವಾರ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಕುರಿತಂತೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಮಂಡಳಿಯ ಮುಖ್ಯಸ್ಥೆ ಅನಿತಾ ಕರ್ವಾಲ್ ಅವರು ಮೌನ ಮುರಿದ್ದು, ಮರುಪರೀಕ್ಷೆ ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಮಾಡುತ್ತಿದ್ದೇವೆ. ಹೊಸ ದಿನಾಂಕಗಳನ್ನು ಶೀಘ್ರವೇ ಘೋಷಿಸಲಾಗುತ್ತದೆ ಎಂದು ಹೇಳಿದ್ದಾರೆ. ಸೋಮವಾರ ಅಥವಾ ಮಂಗಳವಾ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics