ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು
ಪಾಟ್ನ; ದೇಶದಾದ್ಯಂತ ತೀವ್ರ ಸುದ್ದಿ ಹಾಗೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿರುವ ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಕಂಡು ಬರುತ್ತಿದ್ದು, 10ನೇ ತರಗತಿಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಎಬಿವಿಪಿ ಕೈವಾಡವಿದೆ ಎಂಬ ಶಂಕೆಗಳು ವ್ಯಕ್ತವಾಗತೊಡಗಿವೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಾರ್ಖಾಂಡ್ ಪೊಲೀಸರು, 10ನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ವ್ಯಕ್ತಿ ಬಿಹಾರ ರಾಜ್ಯ ಮೂಲದವನಾಗಿದ್ದಾನೆಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಜಾರ್ಖಾಂಡ್'ನ ಛತ್ರಾ ಜಿಲ್ಲೆಯ ಎರಡು ಕೋಚಿಂಗ್ ಸೆಂಟರ್ ಗಳ ಮಾಲೀಕರು ಹಾಗೂ 9 ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಕೇಂದ್ರ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ಅವರು ಮಾತನಾಡಿ, ದೆಹಲಿ ಹಾಗೂ ಹರಿಯಾಣ ರಾಜ್ಯದಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಛತ್ರ ಜಿಲ್ಲೆಯ ಎಸ್'ಪಿ ಅಖಿಲೇಶ್ ಬಿ ವಾರಿಯಾರ್ ಅವರು ಮಾತನಾಡಿ, ಛತ್ರಾ ಜಿಲ್ಲಾಯಲ್ಲಿ ಸ್ಟಡಿ ವಿಷನ್ ಎಂಬ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ಗಳನ್ನು ನಡೆಸುತ್ತಿದ್ದ ಪಂಕಜ್ ಸಿಂಗ್ ಹಾಗೂ ಸತೀಶ್ ಪಾಂಡೇ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ. ಪರೀಕ್ಷೆಗೆ ಇನ್ನು ಒಂದು ದಿನ ಬಾಕಿಯಿರುವಾಗಲೇ ಸೋರಿಕೆಯಾದ ಪ್ರಶ್ನೆಪತ್ರಿಕೆಗಳು ಸಿಕ್ಕಿದ್ದವು. ಆರೋಪಿಗಳು ಶೀಘ್ರಗತಿಯಲ್ಲಿ ಉತ್ತರಗಳನ್ನು ಸಿದ್ಧಪಡಿಸಿ ಹಣವನ್ನು ಪಡೆದು ಪ್ರಶ್ನೆಗಳನ್ನು ನೀಡಿದ್ದಾರೆಂದು ತಿಳಿಸಿದ್ದಾರೆ.
10ನೇ ತರಗತಿಯ ಗಣಿತ ಪ್ರಶ್ನೆಪತ್ರಿಗೆ ಪಾಟ್ನಾದಲ್ಲಿ ಸೋರಿಯಾಗಿ, ವಾಟ್ಸ್ ಆ್ಯಪ್ ಮೂಲಕ ಛಾತ್ರಗೆ ಬಂದಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ದೊರಕಿವೆ. ದೆಹಲಿಗೆ ಸಂಬಂಧವಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಮೊದಲು ಎಲ್ಲಿ ಸೋರಿಕೆಯಾಗಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದಿದ್ದಾರೆ.
ದೆಹಲಿಯಲ್ಲಿರುವ ಆರ್'ಎಸ್ಎಸ್ ಸಂಯೋಜಿತ ವಿದ್ಯಾರ್ಥಿಗಳ ಸಂಘಟನೆ ಹಾಗೂ ಎನ್ಎಸ್'ಯುಐ ವಿದ್ಯಾರ್ಥಿಗಳು ಎಬಿವಿಪಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಜಾರ್ಖಾಂಡ್ ರಾಜ್ಯದಲ್ಲಿ ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಾಗ ಬಹಿರಂಗವಾಗಿ ಸಿಕ್ಕಿಬಿದ್ದಿದೆ ಎಂದು ಆರೋಪ ಮಾಡಿದ್ದಾರೆ.
ಈ ಆರೋಪವನ್ನು ಎಬಿವಿಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ ಸಾಕೇತ್ ಬಹುಗುಣ ಅವರು ನಿರಾಕರಿಸಿದ್ದಾರೆ. ಪ್ರಸ್ತುತ ಎಬಿವಿಪಿಯೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ. ಕೋಚಿಂಗ್ ಸೆಂಟರ್ ತೆರೆಯುತ್ತಿದ್ದಂತೆಯೇ ಎಬಿವಿಪಿಯಿಂದ ಹೊರಬರಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು, ಜಾರ್ಖಾಂಡ್ ಹಾಗೂ ಬಿಹಾರ ರಾಜ್ಯಗಳಲ್ಲಿ ಒಟ್ಟು 60 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರಲ್ಲಿ 15 ಮಂದಿ ಕೋಚಿಂಗ್ ಸೆಂಟರ್ ಗಳನ್ನು ನಡೆಸುತ್ತಿರುವ ಮಾಲೀಕರರಾಗಿದ್ದಾರೆಂದು ತಿಳಿದುಬಂದಿದೆ.
ಇನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ವಾಟ್ಸ್ ಆ್ಯಪ್ ನ ಗ್ರೂಪ್ ನಲ್ಲಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಗುರ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.