ಪುಣೆ: ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ನಿವಾಸದಲ್ಲಿ ಗಂಭೀರ ಭದ್ರತಾ ಲೋಪ ಕಂಡುಬಂದಿದ್ದು, ರಾಜಭವನದ ಆವರಣದಲ್ಲಿದ್ದ 4 ಗಂಧದ ಮರಗಳನ್ನು ಕಳ್ಳರ ಕದ್ದೊಯ್ದಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ರಾಜಭವನದ ಆವರಣದಲ್ಲಿ ಬೆಳೆಸಲಾಗಿದ್ದ ಸುಮಾರು 20 ಸಾವಿರ ರೂ ಮೌಲ್ಯದ 4 ಮರಗಳನ್ನು ಕದೀಮರು ಕದ್ದು ಸಾಗಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ಏಪ್ರಿಲ್ 30ರಂದು ಈ ಘಟನೆ ನಡೆದಿದ್ದು, ಘಟನೆಯಲ್ಲಿ ರಾಜಭವನದ ಭದ್ರತಾ ಅಧಿಕಾರಿಗಳ ಕೈವಾಡ ಕೂಡ ಇದೆ ಎಂದು ಶಂಕಿಸಲಾಗಿದೆ. ಆರಂಭದಲ್ಲಿ ಈ ಬಗ್ಗೆ ಯಾರಿಗೂ ಅನುಮಾನ ಮೂಡಿರಲಿಲ್ಲ. ಆದರೆ ರಾಜಭವನದಲ್ಲಿ ತೋಟದ ಕೆಲಸಗಾರರು ಕೆಲಸ ಮಾಡುತ್ತಿದ್ದ ವೇಳೆ ಅವರು ಮರ ಕಡಿದಿರುವುದನ್ನು ಗಮನಿಸಿದ್ದಾರೆ. ಆ ಮೂಲಕ ಈ ಪ್ರಕರಣ ಹೊರ ಬಿದ್ದಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕಸಭೆ ಸ್ಪೀಕರ್ ಹಾಗೂ ಇನ್ನಿತರ ಸರ್ಕಾರಿ ಅಧಿಕಾರಿಗಳು ಪುಣೆಗೆ ಭೇಟಿ ನೀಡಿದಾಗ ತಂಗುವ ಜಾಗ ಇದಾಗಿದ್ದು, ರಾಜಭವನದ ಹತ್ತಿರದಲ್ಲೇ ಪೊಲೀಸ್ ಠಾಣೆ ಇದ್ದರೂ ಭದ್ರತಾ ಲೋಪ ಉಂಟಾಗಿರುವುದು ಆತಂಕ ಸೃಷ್ಟಿಸಿದೆ. ಕೃತ್ಯ ಎಸಗಿರುವವರ ವಿರುದ್ಧ ಈಗಾಗಲೇ ಛತುಶೃಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.