ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್'ಸಿ/ಎಸ್'ಟಿ) ದೌರ್ಜನ್ಯ ತಡೆ ಕಾಯ್ದೆಯ ಕೆಲವು ನಿಯಮಗಳನ್ನು ಬದಲಿಸಿ ಈ ಹಿಂದೆ ತಾನು ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಎಸ್ ಸಿ/ಎಸ್ ಟಿ ಕಾಯ್ದೆ ಕುರಿತ ಆದೇಶವನ್ನು ಮರು ಪರಿಶೀಲಿಸಬೇಕು ಮತ್ತು ಈ ಕೂಡಲೇ ಆದೇಶಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಕೆ ಗೋಯಲ್ ಮತ್ತು ನ್ಯಾಯಮೂರ್ತಿ ಯು ಯು ಲಲಿತ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಕೋರ್ಟ್ ನೀಡಿದ ಆದೇಶ ಶೇ.100 ರಷ್ಟು ದಲಿತರ ಹಕ್ಕು ರಕ್ಷಣೆ ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವ ಪರವಾಗಿದೆ ಎಂದು ಹೇಳಿದೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು, ಶಾಸಕಾಂಗ ಜಾರಿಗೆ ತಂದ ನಿಯಮಗಳಿಗೆ ವಿರುದ್ಧ ಸುಪ್ರೀಂ ಕೋರ್ಟ್ ನಿಯಮ ಅಥವಾ ಮಾರ್ಗದರ್ಶಿಗಳನ್ನು ರೂಪಿಸುವಂತಿಲ್ಲ ಎಂದು ವಾದಿಸಿದರು.
ಕೋರ್ಟ್ ತೀರ್ಪಿನಿಂದಾಗಿ ದೇಶದಲ್ಲಿ ಜೀವ ಹಾನಿಯಾಗಿದೆ, ಗಲಭೆ, ಕೋಪ, ಅಸಮಾಧಾನ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂದು ವೇಣುಗೋಪಾಲ್ ಅವರು ಕೋರ್ಟ್ ಗೆ ತಿಳಿಸಿದರು. ಆದರೆ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೋರ್ಟ್, ಮಾರ್ಚ್ 20ರ ತನ್ನ ಆದೇಶವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಕಳೆದ ಮಾರ್ಚ್ 20ರಂದು ಸರ್ವೋಚ್ಚ ನ್ಯಾಯಾಲಯ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್ ಮೇಲ್‌ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್‌ಸಿ/ಎಸ್‌ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಎಸ್‌ಸಿ/ಎಸ್‌ಟಿ ಕಾಯಿದೆ ದುರ್ಬಲವಾಯಿತೆಂದು ಭಾವಿಸಿದ ದಲಿತರು ಭಾರತ್ ಬಂದ್ ಕರೆ ನೀಡಿದ್ದರು.
ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಹಿಂಸಾತ್ಮಕ ಪ್ರತಿಭಟನೆಯಲ್ಲಿ ದೇಶಾದ್ಯಂತ 10 ಮಂದಿ ಮೃತಪಟ್ಟಿದ್ದರು ಮತ್ತು ಪೊಲೀಸರು ಸೇರಿದಂತೆ 65 ಮಂದಿ ಗಾಯಗೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos