ಕಥುವಾ ಅತ್ಯಾಚಾರ: ತನಿಖೆಯನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್‌ಗೆ ಆರೋಪಿ ಮನವಿ
ನವದೆಹಲಿ: "ನಾನು ಮುಗ್ದನಾಗಿದ್ದೇನೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ನಿಜವಾದ ಅಪರಾಧಿಗಳನ್ನು ಶಿಕ್ಷಿಸಿ" ಜಮ್ಮು ಕಾಶ್ಮೀರದ ಕಥುವಾದಲ್ಲಿ 8ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಸಾಂಜಿ ರಾಮ್ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾನೆ.
8 ಆರೋಪಿಗಳ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸುವ ಅರ್ಜಿಯ ಸಂಬಂಧ ಓರ್ವ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಆರೋಪಿ ಸಾಂಜಿ ರಾಮ್ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟು 221 ಸಾಕ್ಷಿಗಳು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕಥುವಾದಿಂದ 265 ಕಿ.ಮೀ. ದೂರದಲ್ಲಿರುವ ಚಂಡೀಗಢಕಕ್ಕೆ ಪ್ರಯಾಣಿಸುವುದು ಕಠಿಣವಾಗಲಿದೆ ಎಂಬ ಮನವಿಗೆ ಆರೋಪಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ.
ಸಂತ್ರಸ್ತೆ ಪರ ವಕೀಲರಾದ ದೀಪಿಕಾ ಸಿಂಗ್ ರಜಾವತ್ ವಿಚಾರಣಾ ನ್ಯಾಯಾಲಯದ ವಕೀಲರಲ್ಲ. ಅವರಿಗೆ ನೀಡಿರುವ ಭದ್ರತೆಯನ್ನು ತೆಗೆದು ಹಾಕಬೇಕೆಂದು ಸಹ ಸಾಂಜಿ ರಾಮ್ ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾನೆ.
ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆ ರಸಾನಾ ಗ್ರಾಮದಲ್ಲಿ ಕುದುರೆ ಮೇಯಿಸುತ್ತಿದ್ದ ಅಲೆಮಾರಿ ಜನಾಂಗದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ 7 ದಿನ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಘಟನೆ ರಾಷ್ಟ್ರಾದ್ಯಂತ ಭಾರೀ ಆಕ್ರೋಶ, ಚರ್ಚೆಗಳಿಗೆ ಕಾರಣವಾಗಿತ್ತು.
ಅಲೆಮಾರಿ ಮುಸ್ಲಿಮ್ ಜನಾಂಗವನ್ನು ಗ್ರಾಮದಿಂದ ದೂರವಿಡಲು ಅತ್ಯಾಚಾರ ನಡೆಸುವ ಕುತಂತ್ರ ನಡೆದಿತ್ತೆಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.