ಬಿಹಾರ: ಸ್ವಚ್ಚತಾ ಅಭಿಯಾನದ ರಾಯಭಾರಿಯಾದ ಪಾಕ್ ಬಾಲಕಿ!
ಜಮುಯಿ(ಬಿಹಾರ): ಬಿಹಾರದ ಜಮುಯಿ ಜಿಲ್ಲೆ ಸ್ವಚ್ಚತಾ ರಾಯಭಾರಿಯಾಗಿ ಪಾಕ್ ಬಾಲಕಿ ಆಯ್ಕೆಯಾಗಿದ್ದಾಳೆ! ಇದು ವಿಚಿತ್ರವಾದರೂ ಸತ್ಯ.
ಜಮುಯಿ ಜಿಲ್ಲಾ ಸ್ವಚ್ಚತಾ ಸಮಿತಿ ಮಾಡಿದ ತಪ್ಪೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸ್ವಚ್ಛ ಜಮುಯಿ ಸ್ವಸ್ಥ ಜಮುಯಿ' ಅಭಿಯಾನಕ್ಕಾಗಿ ಸಿದ್ದಪಡಿಸಲಾದ ಕೈಪಿಡಿಯ ಮುಖಪುಟದಲ್ಲಿ ಪಾಕ್ ಬಾಲಕಿಯ ಚಿತ್ರ ಪ್ರಕಟಿಸಲಾಗಿದೆ.
ಚಿತ್ರದಲ್ಲಿನ ಬಾಲಕಿ ಪಾಕಿಸ್ತಾನ ಮೂಲದವಳೆನ್ನುವುದು ತಿಳಿದೊಡನೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಬಾಲಕಿಯು ಪಾಕಿಸ್ತಾನ ರಾಷ್ಟ್ರಧ್ವಜದ ಚಿತ್ರ ಬರೆಯುತ್ತಿರುವ ಭಾವಚಿತ್ರ ಮುಖಪುಟದಲ್ಲಿ ಪ್ರಕಟವಾಗಿರುವುದು ಜನರ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.
ಪಾಕಿಸ್ತಾನದಲ್ಲಿ ಶಿಕ್ಷಣ ಜಾಗೃತಿ ಅಭಿಯಾನಕ್ಕಾಗಿ ಯುನಿಸೆಫ್ ಈ ಬಾಲಕಿಯ ಚಿತ್ರ ಇದು ಎನ್ನುವ ಮಾಹಿತಿ ಸಿಕ್ಕಿದೆ ಇದಾಗಲೇ ಈ ಕೈಪಿಡಿಯ 5 ಸಾವಿರ ಪ್ರತಿಗಳನ್ನು ಮಾಡಿಸಿ ಶಾಲೆ, ಅಂಗನವಾಡಿಗಳಿಗೆ ಹಂಚಲಾಗಿದೆ. ಇದೇ ಕೈಪಿಡಿಯ ಆಧಾರದಲ್ಲಿ ಮಕ್ಕಳಲ್ಲಿ ಸ್ವಚ್ಚತೆಯ ಕಾಳಜಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಜಿಲ್ಲಾ ಸ್ವಚ್ಚತಾ ಸಮಿತಿ ಸದಸ್ಯರೊಬ್ಬರು ಈ ವಿಚಾರದ ಬಗ್ಗೆ ಪ್ರತಿಕ್ರಯಿಸಿದ್ದು ’ಈ ತಪ್ಪಿಗೆ ನಾವು ಜವಾಬ್ದಾರರಲ್ಲ’ ಎಂದಿದ್ದಾರೆ. ಕೈಪಿಡಿ ಮುದ್ರಣಗೊಂಡಿರುವ ಪಾಟ್ಣಾದ ಸುಪ್ರಭ್ ಎಂಟರ್‌ಪ್ರೈಸಸ್ ನ ಮಾಲೀಕರು ಮಾತ್ರ ಸಮಿತಿ ಏನು ದಾಖಲೆಗಳನ್ನು ನೀಡಿತ್ತೋ ಅದನ್ನು ಬಳಸಿ ನಾವು ಈ ಕೈಪಿಡಿ ಮುದ್ರಿಸಿದ್ದೇವೆ ಎಂದಿದ್ದಾರೆ.
ಏತನ್ಮಧ್ಯೆ ವಿವಾದ ತಾರಕಕ್ಕೇರಿರುವ ಕುರಿತು ಮಾಹಿತಿ ಪಡೆದ ಜಮುಯಿ ಜಿಲ್ಲಾಧಿಕಾರಿಗಳು ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.