ಕಥುವಾ ಪ್ರಕರಣ ಸಿಬಿಐಗೆ ನೀಡುವ ಬಗ್ಗೆ ನಾಳೆ ಸುಪ್ರೀಂ ತೀರ್ಪು
ಜಮ್ಮು: ಕಥುವಾ ಗ್ಯಾಂಗ್ ರೇಪ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ.07 ರಂದು ನಡೆಸಲಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ನಾಳೆ ನಿರ್ಧಾರ ಪ್ರಕಟವಾಗಲಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ ಪ್ರಕರಣದ ವಿಚಾರಣೆಯನ್ನು ಮೇ.07 ರ ವರೆಗೆ ಮುಂದೂಡಿತ್ತು. ಪ್ರಕರಣದ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾವಣೆ ಮಾಡುವ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಕೂಡ ಮನವಿ ಬಂದಿದ್ದು, ಸಿಬಿಐ ತನಿಖೆಗೆ ವಹಿಸುವುದರ ಬಗ್ಗೆ ಮೇ.07 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.
ನ್ಯಾಯಯುತವಾಗಿ ವಿಚಾರಣೆ ನಡೆಯದೇ ಇರುವುದು ಕಂಡುಬಂದಲ್ಲಿ ಪ್ರಕರಣವನ್ನು ಬೇರೆಡೆಗೆ ವರ್ಗಾವಣೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ತಮ್ಮ ಕುಟುಂಬದವರಿಗೆ ಜೀವ ಬೆದರಿಕೆ ಇದೆ ಎಂದು ಸಂತ್ರಸ್ತ ಯುವತಿಯ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು, ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದ ಇಬ್ಬರು ಆರೋಪಿಗಳು ಪ್ರಕರಣದ ವಿಚಾರಣೆಯನ್ನು ಜಮ್ಮು ನ್ಯಾಯಾಲಯದಲ್ಲೇ ನಡೆಸಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಕೋರಿದ್ದರು.