ನವದೆಹಲಿ: ಇತ್ತೀಚೆಗೆ ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದ ಚಂಡಮಾರುತ ಇದೀಗ ದಕ್ಷಿಣ ಭಾರತದ ಹಲವು ರಾಜ್ಯಗಳಿಗೂ ಅಪಾಯ ತಂದೊಡ್ಡಿದ್ದು, ಸೋಮವಾರ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.
ಪ್ರಮುಖವಾಗಿ ಹರ್ಯಾಣದಲ್ಲಿ ಚಂಡಮಾರುತ ಭೀತಿಯಿಂದಾಗಿ ಶಾಲಾಕಾಲೇಜುಗಳಿಗೆ 2 ದಿನ ರಜೆ ಘೋಷಣೆ ಮಾಡಲಾಗಿದೆ. ಸೋಮವಾರ 13 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಅದರಂತೆ ಹರ್ಯಾಣದಲ್ಲಿ ಸೋಮವಾರ ಹಾಗೂ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ರಾಜಧಾನಿ ದೆಹಲಿ ಸುತ್ತಮುತ್ತಲಿನ ಪ್ರದೇಶಗಳು, ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಗೃಹ ಇಲಾಖೆಯ ಮೂಲಗಳು ಹೇಳಿವೆ. ಕಳೆದ ವಾರ ರಾಜಸ್ಥಾನ, ಉತ್ತರ ಪ್ರದೇಶ ಐದು ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಸುರಿದ ಭಾರೀ ಮಳೆಗೆ ಕನಿಷ್ಟ 124 ಮಂದಿ ಬಲಿಯಾಗಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಂ ಹಾಗೂ ತ್ರಿಪುರದಲ್ಲಿ ಸೋಮವಾರ ಭಾರೀ ಮಳೆಯಾಗಲಿದೆ ಎನ್ನಲಾಗುತ್ತಿದ್ದು. ಉತ್ತರ ಪ್ರದೇಶದ ಪಶ್ಚಿಮ ಭಾಗಗಳು, ಬಿಹಾರ, ಪಶ್ಚಿಮ ಬಂಗಾಲ, ಸಿಕ್ಕಿಂ, ಒಡಿಶಾ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕೆಲವೆಡೆ ಸೋಮವಾರ ತೀವ್ರ ಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅಲ್ಲದೆ ಸೋಮವಾರ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್, ಹರ್ಯಾಣ, ಚಂಡೀಘಡ, ದೆಹಲಿಯ ಕೆಲವೆಡೆ ಸೋಮವಾರ ಬಿರುಗಾಳಿ ಹಾಗೂ ಗುಡುಗು ಮಿಂಚು ಸಹಿತ ಮಳೆಯಾಗಲಿದೆ . ರಾಜಸ್ತಾನದ ಕೆಲವೆಡೆ ಧೂಳಿನ ಬಿರುಗಾಳಿ ಬೀಸಲಿದೆ ಎಂದು ತಿಳಿಸಲಾಗಿದೆ. ಮಂಗಳವಾರ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಹರ್ಯಾಣ, ಚಂಡೀಗಢ, ದೆಹಲಿ ಕೆಲವೆಡೆ ತೀವ್ರ ಗಾಳಿ ಸಹಿತ ಮಳೆಯಾಗಲಿದೆ. ಮಂಗಳವಾರ ಪಂಜಾಬ್, ಉತ್ತರ ಪ್ರದೇಶದ ಪೂರ್ವಭಾಗ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರ, ದಕ್ಷಿಣ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಭಾರೀ ಬಿರುಗಾಳಿಯ ಜೊತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.