ನವದೆಹಲಿ: ಮಹಿಳೆಯರು ಧರಿಸುವ ಉಡುಗೆಗಳೇ ಅತ್ಯಾಚಾರಕ್ಕೆ ಕಾರಣ ಎಂಬ ವಾದವನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಖಂಡಿಸಿದ್ದಾರೆ.
ಒಂದು ವೇಳೆ ಉಡುಗೆಯೇ ಅತ್ಯಾಚಾರಕ್ಕೆ ಕಾರಣ ಎನ್ನುವುದಾದರೇ ವೃದ್ಧೆಯರು ಹಾಗೂ ಹಸುಗೂಸುಗಳ ಮೇಲೆ ಏಕೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಎಫ್‌ಐಸಿಸಿಐ ಸಂಘಟಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಗಂಡು ಮಕ್ಕಳಲ್ಲಿ ಬೆಳೆಸುವ ಮನೋಸ್ಥಿತಿಯ ಬಗ್ಗೆ ನಾವು ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ,
10 ಘಟನೆಗಳ ಪೈಕಿ 7ರಲ್ಲಿ ಸಂತ್ರಸ್ತರಿಗೆ ಪರಿಚಿತರಾಗಿರುವ ಬಂಧುಗಳು, ಸ್ನೇಹಿತರು, ನೆರೆಮನೆಯವರೇ ಆರೋಪಿಗಳಾಗಿರುತ್ತಾರೆ. ಹಾಗಾಗಿ ಮನೆ ಮಂದಿ ಎಚ್ಚರಿಕೆಯಿಂದ ಇರಬೇಕು, ''ಅಪ್ರಾಪ್ತರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ಕಾನೂನು ಮತ್ತು ಇಲಾಖೆಗಳು ಬಲಗೊಳ್ಳಬೇಕು ಎನ್ನುವುದು ಸತ್ಯವೆ. ಆದರೆ, ಅದಷ್ಟೇ ಸಾಕಾಗುವುದಿಲ್ಲ. ಹೆಣ್ಣು ಮಕ್ಕಳನ್ನು ನೋಡುವ ಗಂಡು ಮಕ್ಕಳ ಮನೋಸ್ಥಿತಿ ಬದಲಾಗಬೇಕಾಗಿದೆ. ಕುಟುಂಬಗಳು ಗಂಡು ಮಕ್ಕಳನ್ನು ಬೆಳೆಸುವಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದರು.