ದೇಶ

ಪೆರೋಲ್ ವೇಳೆ ಲಾಲೂ ಪ್ರಸಾದ್'ರ ಎಲ್ಲಾ ಚಲನವಲನಗಳು ದಾಖಲು: ಜೈಲು ಅಧಿಕಾರಿ

Manjula VN
ರಾಂಚಿ; ಪುತ್ರ ತೇಜ್ ಪ್ರತಾಪ್ ಯಾದವ್ ವಿವಾಹಕ್ಕೆಂದು 3 ದಿನ ಪೆರೋಲ್ ಮೇಲೆ ಹೊರ ಬಂದಿರುವ ಲಾಲೂ ಪ್ರಸಾದ್ ಯಾದವ್ ಅವರ ಎಲ್ಲಾ ಚಲನವಲನಗಳನ್ನೂ ದಾಖಲು ಮಾಡಿಕೊಳ್ಳಲಾಗುತ್ತದೆ. ಮಾಧ್ಯಮಗಳ ಜೊತೆಗೆ ಮಾತನಾಡುವಂತಿಲ್ಲ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಈ ಕುರಿತಂತೆ ಮಾಹಿತಿ ನೀಡಿರುವ ಜೈಲು ಅಧಿಕಾರಿ ಹರ್ಷ್ ಮಂಗಳ ಅವರು, ಆರ್'ಜೆಡಿ ನಾಯಕ ಲಾಲೂ ಅವರಿಗೆ 3 ದಿನಗಳ ಪೆರೋಲ್ ನೀಡಲಾಗಿದೆ. ಪೆರೋಲ್ ಮೇಲೆ ಲಾಲೂ ಹೊರಬಂದಿರುವ ಹಿನ್ನಲೆಯಲ್ಲಿ ಅವರ ಚಲನವಲನಗಳ ಮೇಲೆ ಕಣ್ಗಾವಲಿರಿಸಲು ರಾಂಚಿ ಪೊಲೀಸರ ಒಂದು ತಂಡ ಪಾಟ್ನಗೆ ತೆರಳಿದೆ ಎಂದು ಹೇಳಿದ್ದಾರೆ. 
ಹಲವು ನಿಯಮಗಳ ಮೇರೆಗೆ ಲಾಲೂ ಅವರಿಗೆ ಪೆರೋಲ್ ನೀಡಲಾಗಿದೆ. ಪೆರೋಲ್ ಮೇಲೆ ಹೊರಗೆ ಬಂದಿರುವ ಲಾಲೂ ಅವರು ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ. ಅವರ ಎಲ್ಲಾ ಚಲನವಲನಗಳನ್ನೂ ವಿಡಿಯೋ ಮಾಡಿಕೊಳ್ಳಲಾಗುತ್ತಿದೆ. ಬಿಹಾರ ಹಾಗೂ ಜಾರ್ಖಾಂಡ್ ಪೊಲೀಸರು ಸದಾಕಾಲ ಲಾಲೂ ಅವರಿಗೆ ಭದ್ರತೆಯನ್ನು ನೀಡಲಿದ್ದಾರೆ. ಲಾಲೂ ಅವರ ಭದ್ರತೆಗೆ ಡಿಎಸ್'ಪಿ ರ್ಯಾಂಕ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಪಾಟ್ನಾದಲ್ಲಿ ಮೇ.10 ರಿಂದ 14ರವರೆಗೆ ನಡೆಯಲಿರುವ ಹಿರಿಯ ಮಗ ತೇಜ್ ಪ್ರತಾಪ್ ಮದುವೆಯಲ್ಲಿ ಭಾಗಿಯಾಗುವ ಸಲುವಾಗಿ ಪೆರೋಲ್'ಗೆ ಅವಕಾಶ ನೀಡಬೇಕೆಂದು ಲಾಲೂ ಅವರು ಅರ್ಜಿ ಸಲ್ಲಿಸಿದ್ದರು. 
ಈ ಹಿನ್ನಲೆಯಲ್ಲಿ ಜೈಲು ಆಡಳಿತಾಧಿಕಾರಿಗಳು ಮತ್ತು ಗೃಹ ಇಲಾಖೆಯ ಸಮಾಲೋಚನೆ ಬಳಿಕ ಪೆರೋಲ್'ಗೆ ಅನುಮತಿ ದೊರೆತಿದ್ದು, ಇಂದು ಸಂಜೆ ಲಾಲೂ ಅವರು ವಿಮಾನದಲ್ಲಿ ಪಾಟ್ನಾಗೆ ತೆರಳಲಿದ್ದಾರೆ. 
SCROLL FOR NEXT