ದೇಶ

ಲೋಕೋಪಯೋಗಿ ಹಗರಣ: ಎಸಿಬಿಯಿಂದ ದೆಹಲಿ ಸಿಎಂ ಕೇಜ್ರಿವಾಲ್ ಸಂಬಂಧಿ ಬಂಧನ!

Srinivasamurthy VN
ನವದೆಹಲಿ: ಲೋಕೋಪಯೋಗಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಯನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಗುರುವಾರ ಬೆಳಗ್ಗೆ ದೆಹಲಿಯ ಭ್ರಷ್ಟಾಚಾರ ನಿಗ್ರಹದಳ ಅರವಿಂದ್ ಕೇಜ್ರಿವಾಲ್ ಅವರ ಮೈದುನ ಮಗ ವಿನಯ್ ಬನ್ಸಾಲ್ ಎಂಬುವವರನ್ನು ಬಂಧಿಸಿದ್ದಾರೆ. ಈ ಬಗ್ಗೆ ದೆಹಲಿ ಎಸಿಬಿ ಮುಖ್ಯಸ್ಥ ಅರವಿಂದ್ ದೀಪ್ ಮಾಹಿತಿ ನೀಡಿದ್ದು, ಅಕ್ರಮವಾಗಿ ರಸ್ತೆ ಕಾಮಗಾರಿ ಯೋಜನೆ ಪಡೆದ ಆರೋಪಕ್ಕೆ ಸಂಬಹಂಧಿಸಿದಂತೆ ವಿನಯ್ ಬನ್ಸಾಲ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಎಫ್ ಐಆರ್ ದಾಖಲಾಗಿದ್ದು, ಕೇಜ್ರಿವಾಲ್ ಮೈದುನ ಸುರೇಂದರ್ ಬನ್ಸಾಲ್ ಅವರ ಸಂಸ್ಥೆಯ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ. ಕಳೆದ ವರ್ಷದ ಮೇ 9ರಂದು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಕಾಮಗಾರಿ ಯೋಜನೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ರೇಣು ಕನ್ಸ್ ಸ್ಟ್ರಕ್ಷನ್ ವಿರುದ್ಧ ದೂರು ದಾಖಲಾಗಿತ್ತು, ಅಂತೆಯೇ ಈ ಸಂಸ್ಥೆಯ ಮಾಲೀಕರಾದ ಸುರೇಂದರ್ ಬನ್ಸಾಲ್, ಸಹ ಮಾಲೀಕರಾದ ಕಮಲ್ ಸಿಂಗ್, ಪವನ್ ಕುಮಾರ್ ಅವರ ಹೆಸರುಗಳೂ ಎಫ್ ಐಆರ್ ನಲ್ಲಿ ದಾಖಲಾಗಿದೆ.
ಭ್ರಷ್ಟಾಚಾರ ವಿರೋಧಿ ಸಂಸ್ಥೆ (RACO) ಸ್ಥಾಪಕ ರಾಹುಲ್ ಶರ್ಮಾ ಎಸಿಬಿಗೆ ದೂರು ನೀಡಿದ್ದರು. ಕೇಜ್ರಿವಾಲ್ ಸಂಪುಟದ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಬನ್ಸಾಲ್ ಒಡೆತನದ ಸಂಸ್ಥೆಗೆ ಅಕ್ರಮವಾಗಿ ಕಾಮಗಾರಿ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈವರೆಗೂ ಎಫ್ ಐಆರ್ ನಲ್ಲಿ ಸಚಿವರ ಹೆಸರು ನಮೂದಾಗಿಲ್ಲ.  ಗುತ್ತಿಗೆ ಪಡೆದ ರಾಕೋ ಸಂಸ್ಥೆ ದೆಹಲ್ಲಿಯಲ್ಲಿ ರಸ್ತೆ ಕಾಮಗಾರಿಗಳಲ್ಲಿ ಅಕ್ರಮವೆಸಗಿದೆ. ಉತ್ತರ ದೆಹಲಿಯಲ್ಲಿ ಈ ಸಂಸ್ಥೆ ಮಾಡಿದ್ದ ಒಳಚರಂಡಿ ಕಾಮಗಾರಿ ದಾಖಲೆಗಳು ದೋಷಪೂರಿತವಾಗಿವೆ. ಅಲ್ಲದೆ ಸಂಪೂರ್ಣಗೊಳ್ಳದ ಕಾಮಗಾರಿಗಳಿಗೂ ಲೋಕಪಯೋಗಿ ಇಲಾಖೆಗೆ ಬಿಲ್ ಗಳನ್ನು ನೀಡಿ ಹಣ ಪಡೆಯಲಾಗಿದೆ ಎಂದು ಆರೋಪಿಸಿದ್ದರು.
SCROLL FOR NEXT