ದೇಶ

ಕಾವೇರಿ ಕರಡು ನಿರ್ವಹಣಾ ಯೋಜನೆ ವರದಿ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ

Sumana Upadhyaya

ನವದೆಹಲಿ: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ ರಾಜ್ಯಗಳ ನಡುವೆ ಕಾವೇರಿ ನೀರಿನ ಸುಗಮ ಹಂಚಿಕೆಗೆ ನ್ಯಾಯಾಲಯದ ಪರಿಶೀಲನೆ ಮತ್ತು ಅನುಮೋದನೆಗಾಗಿ ಕಾವೇರಿ ನೀರು ಕರಡು ನಿರ್ವಹಣಾ ಯೋಜನೆ ವರದಿಯನ್ನು ಸೋಮವಾರ ಕೇಂದ್ರ ಸರ್ಕಾರ ಸಲ್ಲಿಸಿದೆ.

ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಸಲ್ಲಿಸಿರುವ ಕರಡು ಯೋಜನೆಯ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ ಖನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ನಮ್ಮ ತೀರ್ಪಿಗೆ ಬದ್ಧವಾಗಿ ಈ ವರದಿ ಇದೆಯೇ ಎಂದು ನಾವು ಪರಿಶೀಲಿಸಬೇಕಾಗಿದೆ,  ಫೆಬ್ರವರಿ 16ರಂದು ನೀಡಿದ್ದ ತೀರ್ಪಿಗೆ ಹೊಂದಿಕೆಯಾಗುವಂತೆ ಈ ಕರಡು ಯೋಜನೆ ಇದೆಯೇ ಎಂದು ಪರಿಶೀಲಿಸುತ್ತೇವೆಯೇ ಹೊರತು ಅದನ್ನು ಸರಿಪಡಿಸಲು ಹೋಗುವುದಿಲ್ಲ. ನಂತರ ಈ ತಿಂಗಳ 16ರಂದು ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

ಮೊನ್ನೆ ಮೇ 8ರಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಗಳಿಗೆ ಸಮ್ಮನ್ಸ್ ನೀಡಿದ್ದ ಸುಪ್ರೀಂ ಕೋರ್ಟ್, ಇಂದು ಕರಡು ಯೋಜನೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎಚ್ಚರಿಕೆ ನೀಡಿತ್ತು. ಫೆಬ್ರವರಿ 16ರಂದು ನೀಡಿರುವ ತೀರ್ಪಿನಂತೆ ಕಾವೇರಿ ನಿರ್ವಹಣಾ ಮಂಡಳಿ ಯೋಜನೆ ರಚಿಸದೆ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡುತ್ತಿದೆ ಎಂದು ಛೀಮಾರಿ ಕೂಡ ಹಾಕಿತ್ತು.

ದಶಕಗಳ ಕಾಲದ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ನೀಡಿದ್ದ ತೀರ್ಪನ್ನು ಜಾರಿಗೆ ತರಲು ಕಾವೇರಿ ನಿರ್ವಹಣಾ ಯೋಜನೆಯನ್ನು ಸಿದ್ದಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಅಲ್ಲದೆ 2007ರ ಕಾವೇರಿ ನೀರು ವಿವಾದ ನ್ಯಾಯಾಧೀಕರಣ ಅವಾರ್ಡ್ ನ್ನು ಬದಲಾಯಿಸಿ ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿತ್ತು.

SCROLL FOR NEXT