ಕೊಚ್ಚಿ: ಡಿಸೆಂಬರ್ 2007ರ ವಗಾಮೋನ್ ಸಿಮಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಕರಣದಲ್ಲಿ 18 ಮಂದಿ ಅಪರಾಧಿಗಳೆಂದು ಕೇರಳದ ಕೊಚ್ಚಿಯ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ತೀರ್ಪು ನೀಡಿದೆ. ಘಟನೆಯಲ್ಲಿ ನ್ಯಾಯಾಲಯ 17 ಮಂದಿಯನ್ನು ಖುಲಾಸೆಗೊಳಿಸಿದೆ.
ಭಾರತೀಯ ದಂಡಸಂಹಿತೆಯ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ವಸ್ತುನಿಷ್ಠ ಕಾಯ್ದೆಯಡಿ ಆರೋಪಿಗಳನ್ನು ತಪ್ಪಿತಸ್ಥರೆಂದು ಗುರುತಿಸಿ ವಿಶೇಷ ನ್ಯಾಯಾಧೀಶ ಕೌಸರ್ ಎಡಪ್ಪಗತ್ ಇಂದು ತೀರ್ಪು ನೀಡಿದರು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಪ್ರಕಟಿಸಲಿದೆ.
ನ್ಯಾಯಾಲಯಕ್ಕೆ ಇಂದು ಇಬ್ಬರು ಆರೋಪಿಗಳನ್ನು ಮಾತ್ರ ಹಾಜರುಪಡಿಸಲಾಗಿತ್ತು. ಇನ್ನುಳಿದವರು ಅಹ್ಮದಾಬಾದ್, ಭೋಪಾಲ್ ಮತ್ತು ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ಬಂಧಿಗಳಾಗಿದ್ದಾರೆ. ಇವರೆಲ್ಲರೂ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು.
ಈ ಆರೋಪಿಗಳು ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಲ್ಲದೆ ಶಸ್ತಾಸ್ತ್ರಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದರು ಮತ್ತು ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು ಎಂದು ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
ಈ ಅಪರಾಧಿಗಳು ಕರ್ನಾಟಕ, ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ 2007ರಲ್ಲಿ ಅಕ್ರಮವಾಗಿ ವಿವಿಧ ಉಗ್ರಗಾಮಿ ತರಬೇತಿ ಶಿಬಿರಗಳನ್ನು ಏರ್ಪಡಿಸಿದ್ದರು. ಇವರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ(ಸಿಮಿ) ಸಾಥ್ ಕೊಟ್ಟಿದ್ದು ತರಬೇತಿ ಶಿಬಿರದಲ್ಲಿ ಸಹಾಯ ಮಾಡಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ನ್ಯಾಯಾಲಯ ಹೇಳಿದೆ.