ದೇಶ

ಕಾವೇರಿ ಸ್ಕೀಂ ಕುರಿತ ಅಂತಿಮ ಆದೇಶಕ್ಕೆ ತಡೆ ನೀಡುವಂತೆ ಮನವಿ: ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Manjula VN
ನವದೆಹಲಿ; ರಾಜ್ಯ ವಿಧಾನಸಭೆ ಅತಂತ್ರ ಸ್ಥಿತಿಯಲ್ಲಿರುವುದರಿಂದ ನೂತನ ಸರ್ಕಾರ ರಚನೆಯಾಗುವವರೆಗೂ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತ ಅಂತಿಮ ಆದೇಶಕ್ಕೆ ತಡೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. 
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ ಅರ್ಜಿಯನ್ನು ತಿರಸ್ಕರಿಸಿದ್ದು, ಕರಡು ಯೋಜನೆ ಸಿದ್ಧಪಡಿಸಿರುವುದು ಕೇಂಗ್ರ ಸರ್ಕಾರವೇ, ಹೊರತು ರಾಜ್ಯ ಸರ್ಕಾರಗಳಲ್ಲ ಎಂದು ಹೇಳಿದೆ. 
ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆ ಕುರಿತು ಅಂತಿಮ ಆದೇಶ ನೀಡಲು ಕೇಂದ್ರ ಸರ್ಕಾರಕ್ಕೆ ನೀಡುವ ಅಧಿಕಾರ ಕುರಿತ ಕಾವೇರಿ ನಿರ್ವಹಣಾ ಮಂಡಳಿಯ ಕರಡಿನಲ್ಲಿರುವ ಕೆಲ ನಿಬಂಧನೆಗಳನ್ನು ಮಾರ್ಪಾಡು ಮಾಡಿ, ಮೇ.17 ಗುರುವಾರದೊಳಗಾಗಿ ಸಲ್ಲಿಸುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಇದೇ ವೇಳೆ ಸೂಚನೆ ನೀಡಿದೆ. 
ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆ ವೇಳೆ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ವಾದ ಮಂಡಿಸಿದ್ದರು. ಕಾವೇರಿ ನಿರ್ವಹಣಾ ಮಂಡಳಿ ಕುರಿತ ಕೇಂದ್ರ ಸರ್ಕಾರ ರಚನೆ ಮಾಡಿರುವ ಕರಡಿಗೆ ಎಲ್ಲಾ ರಾಜ್ಯಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುತ್ತಿವೆ. ನನಗೆ ಕರ್ನಾಟಕ ರಾಜ್ಯದಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳಾಗಲೀ ಅಥವಾ ಕಾನೂನು ಸಚಿವಾಲಗಳಿಂದ ಯಾವುದೇ ರೀತಿಯ ಸೂಚನೆಗಳು ಬಾರದಿರುವುದರಿಂದ ಜುಲೈ ಮೊದಲ ವಾರದವರಿಗೂ ಅಂತಿಮ ಆದೇಶವನ್ನು ತಡೆ ಹಿಡಿಯುವಂತೆ ಮನವಿ ಮಾಡಿದರು. 
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ಕರಡು ಯೋಜನೆ ರೂಪಿಸಿರುವುದು ಕೇಂದ್ರ ಸರ್ಕಾರವೇ ಹೊರತು, ರಾಜ್ಯ ಸರ್ಕಾರಗಳಲ್ಲ ಎಂದು ಹೇಳಿತು. 
ಸುದೀರ್ಘ ವಾದ ವಿವಾದಗಳ ಬಳಿಕ, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಸುಪ್ರೀಂಕೋರ್ಟ್, ಕಾವೇರಿ ನಿರ್ವಹಣಾ ಮಂಡಳಿಯ ಪ್ರಾಧಿಕಾರವನ್ನು ಬೆಂಗಳೂರಿನಿಂದ ದೆಹಲಿ ಸ್ಥಳಾಂತರಿಸುವಂತೆ ತಿಳಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರ ಹೆಸರಿನ ಬದಲು ಕಾವೇರಿ ನಿರ್ವಹಣಾ ಮಂಡಳಿ ಎಂದು ಹೆಸರಿಡುವಂತೆ ಸೂಚಿಸಿದೆ. 
SCROLL FOR NEXT