ದೇಶ

ಕಾವೇರಿ ಸ್ಕೀಮ್‌ ಅಂತಿಮಗೊಳಿಸುವ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Lingaraj Badiger
ನವದೆಹಲಿ: ಕಾವೇರಿ ನಿರ್ವಹಣಾ ಯೋಜನೆ ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಕಾವೇರಿ ಸ್ಕೀಮ್ ಅನ್ನು ಅಂತಿಮಗೊಳಿಸುವ ವೇಳೆ ನಾಲ್ಕು ರಾಜ್ಯಗಳ ಸಲಹೆಯನ್ನು ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ಕಾವೇರಿ ಸ್ಕೀಮ್ ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದಂತೆ ಮೇ 22 ಅಥವಾ 23ರಂದು ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿದೆ.
ಇದೇ ವೇಳೆ ಕರ್ನಾಟಕದ ಪರ ವಕೀಲ ಶ್ಯಾಮ್ ದಿವಾನ್ ಅವರು, ಕಾವೇರಿ ನಿರ್ವಹಣಾ ಸ್ಕೀಮ್ ಅಂತಿಮಗೊಳಿಸುವ ಮುನ್ನ ರಾಜ್ಯದ ಸಲಹೆಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದರು.
ಇನ್ನು ಕೇಂದ್ರ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು, ಕೇಂದ್ರ ಸರ್ಕಾರ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಸ್ಕೀಮ್ ನ ನಿಬಂಧನೆಗಳಲ್ಲಿ  ಮಾರ್ಪಾಡು ಮಾಡಿದೆ ಎಂದು ತಿಳಿಸಿದರು.
ನಿನ್ನೆಯಷ್ಟೇ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ಕರಡು ಸ್ಕೀಮ್‌ ಅನ್ನು ಅಂತಿಮಗೊಳಿಸದಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು.
ರಾಜ್ಯದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸ್ಕೀಮ್‌ ಬಗ್ಗೆ ಯಾವುದೇ ಸಲಹೆ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕರಡನ್ನು ಅಂತಿಮಗೊಳಿಸುವುದನ್ನು ಜುಲೈ ಮೊದಲ ವಾರದ ವರೆಗೆ ತಡೆಹಿಡಿಯಬೇಕು ಎಂದು ಕರ್ನಾಟಕ ಮನವಿ ಮಾಡಿತ್ತು. ಆದರೆ, ''ಕರಡು ರೂಪಿಸುವುದು ಕೇಂದ್ರ ಸರ್ಕಾರದ ಕೆಲಸ. ರಾಜ್ಯಗಳಿಗೆ ಅದರಲ್ಲಿ ಯಾವುದೇ ಪಾತ್ರವಿಲ್ಲ,'' ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿತ್ತು.
SCROLL FOR NEXT