ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್
ನವದೆಹಲಿ: ಸರ್ವಾಧಿಕಾರದ ಅಧೀನದಲ್ಲಿರುವ ಪಾಕಿಸ್ತಾನದಲ್ಲಿರುವಂತಹದ್ದೇ ಪರಿಸ್ಥಿತಿ ಇಂದು ಭಾರತದಲ್ಲಿಯೂ ನಿರ್ಮಾಣವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ದೇಶಕ್ಕೆ ಅವಮಾನ ಮಾಡಿದ್ದಾರೆಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಶುಕ್ರವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಡಿ ಹಾಗೂ ಆಡಳಿತಾಢ ಪಕ್ಷವನ್ನು ವಿರೋಧ ಪಕ್ಷಗಳು ಟೀಕೆ ಮಾಡುವುದು ಸರಿ. ಆದರೆ, ಕಾಂಗ್ರೆಸ್ ಅಧ್ಯಕ್ಷರು ದೇಶದ ವಿರುದ್ಧ ಮಾತನಾಡಿದ್ದಾರೆ. ಈಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ. ಈ ರೀತಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ರಾಹುಲ್ ನೀಡಬಾರದಿತ್ತು ಎಂದು ಹೇಳಿದ್ದಾರೆ.
ಇದರಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರೂ ಕೂಡ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿತ್ತು. ದೇಶದಲ್ಲಿರುವ ಪರಿಸ್ಥಿತಿಯನ್ನು ಥರ್ಡ್ ರೇಟ್ ಕಂಟ್ರಿ (ಕೀಳು ದೇಶ) ಪಾಕಿಸ್ತಾನಕ್ಕೆ ಹೋಲಿಕೆ ಮಾಡಿರುವುದು ಭಾರತಕ್ಕೆ ಅವಮಾನ ಮಾಡಿದಂತೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಇದೀಗ ನಮ್ಮ ಹಸ್ತದಲ್ಲಿದೆ. ಎಲ್ಲಿ ತಾನು ಅಧಿಕಾರ ಕಳೆದುಕೊಳ್ಳುತ್ತೇನೆಂಬ ಭೀತಿಯಲ್ಲಿ ಕಾಂಗ್ರೆಸ್ ಇದೆ. ರಾಹುಲ್ ಗಾಂಧಿಯವರು ಮೋದಿ, ಬಿಜೆಪಿ ಅಥವಾ ಯಾರ ಮೇಲಾದರೂ ಟೀಕೆ, ವಾಗ್ದಾಳಿ ನಡೆಸಬಹುದು. ಆದರೆ, ದೇಶದ ಮೇಲೆ ದಾಳಿ ನಡೆಸುವುದು ಸರಿಯಲ್ಲ. ದೇಶ ಅತ್ಯಂತ ಮುಖ್ಯವಾದದ್ದು, ಅಂತಹ ದೇಶವನ್ನು ಕೀಳು ದೇಶವಾಗಿರುವ ಪಾಕಿಸ್ತಾನಕ್ಕೆ ಹೋರಿಗೆ ಮಾಡಿರುವುದು ಅವಮಾನ ಮಾಡಿದಂತೆ. ರಾಹುಲ್'ಗೆ ಈ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲವೇ? ರಾಹುಲ್ ಮೊದಲು ಮಾನಸಿಕ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಜನ ಸ್ವರಾಜ್ಯ ಸಮ್ಮೇಳನದಲ್ಲಿ ನಿನ್ನೆ ಮಾತನಾಡಿದ್ದ ರಾಹುಲ್ ಗಾಂಧಿಯವರು, ಸರ್ವಾಧಿಕಾರದ ಅಧೀನದಲ್ಲಿರುವ ಪಾಕಿಸ್ತಾನದಲ್ಲಿರುವಂತಹ ಪರಿಸ್ಥಿತಿ ಇಂದು ಭಾರತದಲ್ಲಿಯೂ ನಿರ್ಮಾಣವಾಗುತ್ತಿದೆ. ಜನರು ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದು ಸಾಮಾನ್ಯ. ಆದರೆ, ಬಿಜೆಪಿ ಆಡಳಿತದಲ್ಲಿ ನ್ಯಾಯಮೂರ್ತಿಗಳೇ ನ್ಯಾಯಕ್ಕಾಗಿ ಜನರ ಎದುರು ಬಂದಿದ್ದರು. ಸ್ವತಂತ್ರ ಭಾರತದಲ್ಲಿ ಈ ರೀತಿಯ ನಡೆದಿದ್ದು ಇದೇ ಮೊದಲು ಎಂದು ಹೇಳಿದ್ದರು.