ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಮೋದಿ ಟೀಂ ಸಿದ್ಧತೆ ಮಾಡಿಕೊಳ್ಳುತ್ತಿದ್ದು 4 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಅದರಿಂದ ಜನರಿಗೆ ಉಂಟಾಗಿರೌವ ಪ್ರಯೋಜನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡುವುದಕ್ಕೆ ಯೋಜನೆ ರೂಪಿಸಲಾಗಿದೆ.
ಸರ್ಕಾರದ ಯೋಜನೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನೀಡುವ ಜವಾಬ್ದಾರಿಯನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ಹೊತ್ತುಕೊಂಡಿದ್ದು, ಇದಕ್ಕಾಗಿ ದೇಶದ ಪ್ರತಿ ಜಿಲ್ಲೆಯಲ್ಲಿಯೂ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಗಳನ್ನು ನಿಯೋಜನೆ ಮಾಡಲಿದೆ. ಸಾಮಾಜಿಕ ಜಾಲತಾಣದ ನಿರ್ವಾಹಕರು ಸರ್ಕಾರದ ಯೋಜನೆಗಳು ಹಾಗೂ ಅದರಿಂದ ಜನತೆಗೆ ಉಂಟಾಗಿರುವ ಪ್ರಯೋಜನಗಳ ಬಗೆಗಿನ ಧನಾತ್ಮಕ ಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಜವಾಬ್ದಾರಿ ಹೊಂದಿದ್ದಾರೆ.
ಇದೇ ವೇಳೆ ಸರ್ಕಾರದ ಯೋಜನೆಗಳು ಹಾಗೂ ಸರ್ಕಾರದ ವಿರುದ್ಧ ಪೋಸ್ಟ್ ಮಾಡಲಾಗುವ ಸುಳ್ಳು ಸುದ್ದಿಯ ಬಗ್ಗೆಯೂ ಈ ಸಾಮಾಜಿಕ ಜಾಲತಾಣ ನಿರ್ವಹಣೆಯ ತಂಡವೂ ಗಮನ ಹರಿಸಲಿದೆ. ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ತನ್ನ ಯೋಜನೆಗಳ ಧನಾತ್ಮಕ ಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.