ಸಿಬಿಐ ತನಿಖೆಗೆ ಆಗ್ರಹಿಸಿ ಬರಿಗಾಲಲ್ಲೇ ನಡೆದ ಬಿಜೆಪಿ ನಾಯಕ
ಶ್ರೀನಗರ: ಜಮ್ಮು-ಕಾಶ್ಮೀರ ಸಮ್ಮಿಶ್ರ ಸರ್ಕಾರದ ಮಾಜಿ ಸಚಿವ, ಬಿಜೆಪಿ ನಾಯಕ ಚೌಧರಿ ಲಾಲ್ ಸಿಂಗ್, ಕಥುವಾ ಅತ್ಯಾಚಾರ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಬರಿಗಾಲಲ್ಲಿ ನಡೆದು ಪಾದಯಾತ್ರೆ ಮಾಡಿದ್ದಾರೆ.
ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ರ್ಯಾಲಿ ಹಮ್ಮಿಕೊಂಡು ಅತ್ಯಾಚಾರದ ಆರೋಪಿಗಳಿಗೆ ಬೆಂಬಲ ನೀಡಿರುವ ಆರೋಪ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಮಾಜಿ ಸಚಿವರು ಕಥುವಾ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಪಟ್ಟು ಹಿಡಿದಿದ್ದು ಮೇ.20 ರಂದು ಸಿಬಿಐ ತನಿಖೆ ಎದುರಿಸುವುದಕ್ಕೂ ಮುನ್ನ ಕಥುವಾ ಜಿಲ್ಲೆಯಲ್ಲಿ ಬರಿಗಾಲಲ್ಲಿ ನಡೆದು ತನಿಖೆಗೆ ಆಗ್ರಹಿಸಿದ್ದಾರೆ.
ನಿರಂತರವಾಗಿ ಸುಮಾರು 5 ಗಂಟೆಗಳ ಕಾಲ ಬರಿಗಾಲಲ್ಲೇ ನಡೆದಿರುವ ಲಾಲ್ ಸಿಂಗ್ ಕಾಲಲ್ಲಿ ಗುಳ್ಳೆಗಳು ಕಾಣಿಸಿಕೊಂಡಿವೆ. ಕಥುವಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಮ್ ಬ್ರಾಂಚ್ ಪೊಲೀಸರು 8 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದಾರೆ.