ದೇಶ

ಇತರೆ ರಾಜ್ಯಗಳಿಗೂ ಹಬ್ಬಿದ ಕಾಂಗ್ರೆಸ್ ಹೋರಾಟ, ಬಿಜೆಪಿ ಸರ್ಕಾರ ಕೊನೆಗೊಳಿಸಲು ಸಿದ್ಧತೆ

Srinivasamurthy VN
ಪಣಜಿ: ಕರ್ನಾಟಕದಲ್ಲಿ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದಂತೆಯೇ ಅತ್ತ ಇತರೆ ರಾಜ್ಯಗಳ ಕಾಂಗ್ರೆಸ್ ಘಟಕಗಳಲ್ಲಿ ಹೊಸ ಹುರುಪು ಮನೆ ಮಾಡಿದ್ದು, ಕರ್ನಾಟಕ ಮಾದರಿಯಲ್ಲೇ ಅಲ್ಲಿನ ಬಿಜೆಪಿ ಸರ್ಕಾರ ಉರುಳಿಸಲು ರಣತಂತ್ರ ರೂಪಿಸುತ್ತಿವೆ.
ಈಗಾಗಲೇ ಈ ಸಂಬಂಧ ಗೋವಾದಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಗೋವಾದಲ್ಲಿ ವಿಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿವೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೋವಾ ಕಾಂಗ್ರೆಸ್ ಘಟಕದ ವಕ್ತಾರ ಯತೀಶ್ ನಾಯ್ಕ್ ಅವರು, ಕರ್ನಾಟಕದಲ್ಲಿ ಏನಾಗಿದೆ ಎಂಬುದು ಇದೀಗ ಎಲ್ಲರಿಗೂ ತಿಳಿದಿದೆ. ಗೋವಾದ ಬಿಜೆಪಿ ಸರ್ಕಾರಕ್ಕೆ ಸ್ವಲ್ಪವಾದರೂ ನೈತಿಕತೆ, ನಾಚಿಕೆ ಇದ್ದರೆ ಕೂಡಲೇ ಬಹುಮತ ಸಾಬೀತು ಪಡಿಸಲಿ ಅಥವಾ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಇಂತಹುದೇ ಬೇಡಿಕೆ ಇದೀಗ ಮಣಿಪುರ, ಮೇಘಾಲಯ, ಬಿಹಾರ ರಾಜ್ಯಗಳಲ್ಲೂ ಕೇಳಿ ಬಂದಿದ್ದು, ಬಿಹಾರದಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಆರ್ ಜೆಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಬಳಿ ಹಕ್ಕೊತ್ತಾಯ ಮಾಡಿದೆ. 
ಒಟ್ಟಾರೆ ಕರ್ನಾಟಕ ಸರ್ಕಾರದ ರಾಜಕೀಯ ಬೆಳವಣಿಗೆಗಳು ಇತರೆ ರಾಜ್ಯಗಳಲ್ಲಿ ಮಂಕಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಉತ್ತೇಜನ ನೀಡಿದಂತಾಗಿದೆ. ಅಲ್ಲದೆ ಆಕ್ರಮಣಕಾರಿ ಬಿಜೆಪಿಗೆ ಹೇಗೆ ಬ್ರೇಕ್ ಹಾಕಬಹುದು ಎಂದು ಕರ್ನಾಟಕದಿಂದ ಕಲಿಯುವಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT