ಜಮ್ಮು; ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದ ಬಳಿಕ ಶಾಂತಿ ಸ್ಥಾಪನೆಗೆ ಬದ್ಧ ಎಂದು ಹೇಳಿದ್ದ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದ್ದು, ಗಡಿಯಲ್ಲಿ ತನ್ತ ಪುಂಡಾಟವನ್ನು ಮುಂದುವರೆಸಿದೆ.
ಜಮ್ಮುವಿನ ಆರ್'ಎಸ್ ಪುರ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಈವೇಳೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಆರ್'ಎಸ್ ಪುರ ಸೆಕ್ಟರ್ ಬಳಿಯಿರುವ ಪೊಲೀಸ್ ಠಾಣೆ ಮೇಲೆ ಮಾರ್ಟರ್ ಶೆಟ್ ಗಳ ದಾಳಿ ನಡೆಸಲಾಗಿದ್ದು, ಈ ವೇಳೆ ಯೋಧರೊಬ್ಬರಿಗೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.
ರಂಜಾನ್ ತಿಂಗಳಾದ ಹಿನ್ನಲೆಯಲ್ಲಿ ಕದನ ವಿರಾಮಕ್ಕೆ ಭಾರತ ಕರೆ ನೀಡಿತ್ತು. ಇದನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾದ ಪಾಕಿಸ್ತಾನ, ಗಡಿಯಲ್ಲಿ ಸೇನೆಯನ್ನು ಗುರಿಯಾಗಿಸಿಕೊಂಡು ಅಪ್ರಚೋದಿನ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಹಲವು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದರು.
ಪಾಕಿಸ್ತಾನ ತನ್ನ ದುರ್ನಡತೆ ಪ್ರದರ್ಶಿಸಿದ್ದ ಹಿನ್ನಲೆಯಲ್ಲಿ ಮೇ.19 ರಂದು ಭಾರತೀಯ ಸೇನೆ ತಕ್ಕ ಪಾಠವನ್ನು ಕಲಿಸಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನ ಸೇನೆ 4 ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಹೆದರಿದ ಪಾಕಿಸ್ತಾನ ಸೇನೆ, ಶಾಂತಿ ಕಾಪಾಡಲು ಬದ್ಧವಾಗಿದ್ದೇವೆಂದು ತಿಳಿಸಿತ್ತು. ಇದೀಗ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಲು ಪಾಕಿಸ್ತಾನ ಆರಂಭಿಸಿದೆ.