ತೂತುಕುಡಿ: ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ಅಮಾನುಷ ಹೇಳಿಕೆ ವೈರಲ್ ಆಗತೊಡಗಿದೆ.
ಎನ್ ಡಿಟಿವಿ ವರದಿಯ ಪ್ರಕಾರ ಪ್ರತಿಭಟನೆ ವೇಳೆ ಪೊಲೀಸ್ ಬಸ್ ಮೇಲೆ ನಿಂತಿದ್ದ ಅಧಿಕಾರಿಯೊಬ್ಬರು "ಕನಿಷ್ಟ ಒಬ್ಬರಾದರೂ ಸಾಯಬೇಕೆಂದು ಹೇಳಿದ್ದು, ಈ ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಫೈರಿಂಗ್ ನಡೆಸಿದ್ದಾರೆ. ಆದರೆ ಈ ವ್ಯಕ್ತಿ ಮಾಡಿದ ಫೈರಿಂಗ್ ನಿಂದ ಬುಲೆಟ್ ಯಾರಿಗಾದರೂ ಹೊಕ್ಕಿದೆಯೇ ಇಲ್ಲವೇ, ಈ ಪೊಲೀಸ್ ಅಧಿಕಾರಿಯ ಬದಲು ಬೇರೆ ಯಾರಾದರೂ ಫೈರಿಂಗ್ ನಡೆಸಿದ್ದಾರೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ.
ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ನಿಂದಾಗಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ನಡೆಸಿದ ಗೋಲಿಬಾರ್ ಗೆ ಓರ್ವ ಬಾಲಕಿಯೂ ಮೃತಪಟ್ಟಿದ್ದಾಳೆ. ವಿಷಯುಕ್ತ ಅನಿಲ ಹೊರಸೂಸುವಿಕೆಯಿಂದ ನಾನಾ ಬಗೆಯ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ತಾಮ್ರ ಮಿಶ್ರಿತ ಘಟಕ ಸ್ಟೆರ್ಲೈಟ್ ಕಂಪನಿ ಮುಚ್ಚುವಂತೆ ಆಗ್ರಹಿಸಿ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.