ಚೆನ್ನೈ: ಸ್ಟೆರ್ಲೈಟ್ ತಾಮ್ರದ ಕಾರ್ಖಾನೆ ವಿರುದ್ಧ ತಮಿಳುನಾಡಿನಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಯಿಂದಾಗಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಪೊಲೀಸ್ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಮೇ 22ರಂದು ಭುಗಿಲೆದ್ದಿದ್ದ ಪ್ರತಿಭಟನೆ ಸಮಯ ಕಳೆದಂತೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವರೆಗೂ ಪೊಲೀಸ್ ಫೈರಿಂಗ್, ದಾಳಿ ಮತ್ತು ಕಲ್ಲು ತೂರಾಟದಂತಹ ಪ್ರಕರಣಗಳಲ್ಲಿ ಗಾಯಗೊಂಡವರ ಸಂಖ್ಯೆ ಕೂಡ ಇದೀಗ 70ಕ್ಕೆ ಏರಿಕೆಯಾಗಿದೆ.
ಕಳೆದ ರಾತ್ರಿ ಹಿಂಸಾಚಾರ ಪೀಡಿತ ತೂತುಕುಡಿಯಲ್ಲಿ ಯಾವುದೇ ರೀತಿಯ ಹೊಸ ಪ್ರತಿಭಟನೆ ಅಥವಾ ಗಲಭೆ ಪ್ರಕರಣಗಳು ವರದಿಯಾಗಿಲ್ಲ. ಪ್ರಸ್ತುತು ಹಿಂಸಾಚಾರ ಪೀಡಿತ ತೂತುಕುಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆಯಿಂದಲೇ ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದೆ ಎನ್ನಲಾಗದಿದೆ.
ಅಂತೆಯೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದ್ದು, ಅರೆಸೇನಾಪಡೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಂತೆಯೇ ಹಿಂಸಾಚಾರ ಪ್ರಕರಣ ಸಂಬಂಧ ಈ ವರೆಗೂ ಸುಮಾರು 67 ಮಂದಿಯನ್ನು ಬಂಧಿಸಲಾಗಿದೆ.
ತೂತುಕುಡಿಯಲ್ಲಿರುವ ಸ್ಟೆರ್ಲೈಟ್ ತಾಮ್ರದ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ನಾಳೆ ಅಂದರೆ ಮೇ 25ರಂದು ಡಿಎಂಕೆ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದ್ದು, ಇದೀಗ ಭದ್ರತೆ ವಿಚಾರ ಇದೀಗ ರಾಜ್ಯಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.