ಮಾನಸಸರೋವರದಲ್ಲಿ ಪವಿತ್ರ ಸ್ನಾನಕ್ಕೆ ಚೀನಾದಿಂದ ಅಡ್ಡಿ: ಭಾರತೀಯ ಯಾತ್ರಿಕರ ಆರೋಪ
ನವದೆಹಲಿ: ಕೈಲಾಸ ಮಾನಸಸರೋವರದಲ್ಲಿ ಪವಿತ್ರ ಸ್ನಾನಕ್ಕೆ ಚೀನಾ ಅಡ್ಡಿ ಪಡಿಸುತ್ತಿದೆ ಎಂದು ಭಾರತೀಯ ಯಾತ್ರಿಕರು ಆರೋಪ ಮಾಡಿದ್ದಾರೆ.
ಮಾನಸಸರೋವರ ಯಾತ್ರೆಗೆ ನಾತು-ಲಾ ಪಾಸ್ ಪ್ರದೇಶವನ್ನು ಮುಕ್ತಗೊಳಿಸುವುದಕ್ಕೆ ಸಂಬಂಧಿಸಿದಂತೆ ಚೀನಾ-ಭಾರತದ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಭಾರತದ ಯಾತ್ರಾರ್ಥಿಗಳಿಂದ ಆರೋಪ ಕೇಳಿಬಂದಿದೆ. ಮೇ.8 ರಂದು ಚೀನಾ ಅಧಿಕಾರಿಗಳೊಂದಿಗೆ ಮಾತುಕತೆ ಬಳಿಕ ಯಾತ್ರೆಗೆ ನಾತು-ಲಾ ಪಾಸ್ ಪ್ರದೇಶ ಮುಕ್ತವಾಗಿದೆ ಎಂದು ಸುಷ್ಮಾ ಸ್ವರಾಜ್ ಘೋಷಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಮಾನಸಸರೋವರದಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಚೀನಾ ಅಡ್ಡಿಪಡಿಸುತ್ತಿದೆ ಎಂದು ಭಾರತೀಯ ಯಾತ್ರಿಕರಿಂದ ಆರೋಪ ಕೇಳಿಬಂದಿದೆ. ಪ್ರತಿ ವರ್ಷ ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಮಾನಸಸರೋವರ ಯಾತ್ರೆಯನ್ನು ಆಯೋಜಿಸುತ್ತದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಹಕಾರದಲ್ಲಿ ಆಯೋಜನೆಯಾಗುವ ಈ ಯಾತ್ರೆಯನ್ನು ಲಿಪುಲೇಖ್ ಪಾಸ್ (ಉತ್ತರಾಖಂಡ್) ಹಾಗೂ ನಾತುಲಾ ಪಾಸ್ (ಸಿಕ್ಕಿಂ) ಮೂಲಕ ತಲುಪಬಹುದಾಗಿದೆ.