ಉತ್ತರ ಪ್ರದೇಶ : ರಾಜಕೀಯವಾಗಿ ನಿರ್ಣಯಕವಾಗಿರುವ ಕೈರಾನ ವಿಧಾನಸಭಾ ಕ್ಷೇತ್ರ ಸೇರಿದಂತೆ ಹತ್ತು ರಾಜ್ಯಗಳ 10 ವಿಧಾನಸಭೆ ಹಾಗೂ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಇಂದು ಮತದಾನ ಪ್ರಗತಿಯಲ್ಲಿದೆ.
ಕೈರಾನ ಮಾತ್ರವಲ್ಲದೇ ಮಹಾರಾಷ್ಟ್ರದ ಬಾಂದ್ರಾ- ಗೊಂಡಿಯಾ ಮತ್ತು ಫಲ್ ಘರ್ ಹಾಗೂ ನಾಗಲ್ಯಾಂಡಿನಲ್ಲಿ ಒಂದು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಕೈರಾನ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಎಲ್ಲಾ ವಿರೋಧಪಕ್ಷಗಳು ಒಗ್ಗೂಡಿ ಪೈಪೋಟಿ ನಡೆಸುತ್ತಿವೆ.
ಬಿಜೆಪಿ ಎಂಪಿ ಹುಕುಂ ಸಿಂಗ್ ನಿಧನ ಹೊಂದಿದ್ದ ನಂತರ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಅವರ ಮಗಲು ಮೃಗಾಂಕಾ ಸಿಂಗ್ ಈಗ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಅವರ ಎದುರಾಳಿಯಾಗಿ ಆರ್ ಜೆಡಿಯಿಂದ ತಬಾಸಮ್ ಹಸನ್ ಸ್ಪರ್ಧಿಸಿದ್ದು, ಅವರಿಗೆ ಕಾಂಗ್ರೆಸ್, ಎಸ್ ಪಿ, ಬಿಎಸ್ ಪಿ ಬೆಂಬಲ ಘೋಷಿಸಿವೆ.
ಗೋರಖ್ ಪುರ ಮತ್ತು ಫಲ್ಪುರ್ ಲೋಕಸಭಾ ಉಪ ಚುನಾವಣೆಯಲ್ಲಿನ ಯಶಸ್ಸು ಇಲ್ಲಿಯೂ ಮುಂದುವರೆಯಲಿದೆ ಎಂಬುದು ವಿರೋಧಪಕ್ಷಗಳ ಲೆಕ್ಕಾಚಾರವಾಗಿದೆ. ಈ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನ ನಡೆಸಿದೆ.
ಬಿಜೆಪಿ ಸಂಸದ ಚಿಂತಾಮಣ್ ವಾನಾಗ ಜನವರಿಯಲ್ಲಿ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಫಲ್ ಘರ್ ನಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಾಂದ್ರಾ- ಗೊಂಡಿಯಾದಲ್ಲಿ ನಾನಾ ಪಟೊಲ್ ಬಿಜೆಪಿ ತ್ಯಜಿಸಿ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯುತ್ತಿದೆ.
ನಾಗಲ್ಯಾಂಡ್ ನಲ್ಲಿಯೂ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಕೊಹಿಮಾದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಅಭಿಜಿತ್ ಸಿನ್ಹಾ ತಿಳಿಸಿದ್ದಾರೆ. ಮೇ 31 ರಂದು ಈ ಎಲ್ಲಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.